ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳು ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳು, ಸ್ತ್ರೀಯರ ಶಿಕ್ಷಣದ ಮಹತ್ವ, ಮಹಿಳೆಯರ ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಮೂಲ ಉದ್ದೇಶ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅನಿತಾ ಲಕ್ಷ್ಮಿ ಹೇಳಿದರು.
ನಗರದ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೊಡ್ಡಬಳ್ಳಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ
ಉಜ್ವಲವಾದ ನಾಳೆಗಾಗಿ ಹೆಣ್ಣುಮಕ್ಕಳ ಸಬಲೀಕರಣ ಎಂಬ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಅವರು ಲಿಂಗ ಅನುಪಾತ, ಹೆಣ್ಣು ಮಕ್ಕಳ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದು, ಹೆಣ್ಣು ಮಗುವನ್ನು ಉಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಕುರಿತು ಜಾಗೃತಿ ಅಭಿಯಾನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ ಚಿಕ್ಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದ ಇಂದಿರಾ ಗಾಂಧಿಯವರು ಅಧಿಕಾರ ವಹಿಸಿಕೊಂಡ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
1966 ಜನವರಿ 24 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ, ಹೆಣ್ಣು ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಅಕ್ಕ-ತಂಗಿಯಾಗಿ, ಸ್ನೇಹಿತೆಯಾಗಿ ಎಲ್ಲರ ಮನೆ ಮನಗಳನ್ನು ಬೆಳಗುತ್ತಾಳೆ.
ಹೆಣ್ಣೆಂದರೆ ಮನೆಯ ನಗುವಿನ ಕೀಲಿ ಕೈ, ಮನೆಯ ಸ್ವಚ್ಛತೆಯ ರಾಯಭಾರಿ, ಕುಟುಂಬದ ಆರ್ಥಿಕ ಸಲಹೆಗಾರ್ತಿ, ಪ್ರಕೃತಿಗೂ ಹೋಲುವ, ಸಂಸ್ಕೃತಿಯ ಪ್ರತೀಕ, ಸಂಬಂಧಗಳನ್ನು ಬೆಳೆಸುವ ಸೃಷ್ಟಿಕರ್ತೆ, ಹೆಣ್ಣು ಮನೆಗೆ ಮಾತ್ರ ಮಹಾಲಕ್ಷ್ಮಿ ಅಲ್ಲ, ಈ ಸೃಷ್ಟಿಗೆ ಮೂಲ ಹೆಣ್ಣು. ಹೆಣ್ಣೆಂದರೆ ಪ್ರಕೃತಿ, ಹೆಣ್ಣೆಂದರೆ ಸಂಸ್ಕೃತಿ, ಪ್ರಕೃತಿಯನ್ನು ಉಳಿಸೋಣ, ಸಂಸ್ಕೃತಿಯನ್ನು ಬೆಳೆಸೋಣ, ಹೆಣ್ಣಿನ ಭ್ರೂಣಹತ್ಯೆ ಆಗುವುದು ನಿಲ್ಲಬೇಕು, ಜಗತ್ತಿನಲ್ಲಿ ರಜೆ ಇಲ್ಲದೆ ದುಡಿಮೆ ಮಾಡುವ ಒಂದು ಜೀವ ಇದೆ ಎಂದರೆ ಅದು ಹೆಣ್ಣು ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ಹಿರಿಯ ಮೇಲ್ವಿಚಾರಕಿ ತೇಜಸ್ವಿನಿ, ಸಂಯೋಜಕರಾದ ಲೋಕೇಶ್, ಉಪಪ್ರಾಂಶುಪಾಲರಾದ ಕೆ. ದಕ್ಷಿಣಾಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.