ಹೆಂಡತಿ ಹಾಗೂ ಪತ್ನಿ ತಂದೆ (ಮಾವ) ಕಾಟಕ್ಕೆ ಬೇಸತ್ತ ಹೆಡ್ ಕಾನ್‌ಸ್ಟೇಬಲ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ.
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ಪಿ.ಸಿ.ತಿಪ್ಪಣ್ಣ ರೈಲಿಗೆ ತಲೆಕೊಟ್ಟು ಸೂಸೈಡ್ ಮಾಡಿಕೊಂಡ ಹೆಡ್ ಕಾನ್‌ಸ್ಟೇಬಲ್.
ಪಿ.ಸಿ.ತಿಪ್ಪಣ್ಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾಗನಾತಪುರದ ಕೃಷ್ಣಪ್ಪಲೇಔಟ್ನಲ್ಲಿ ವಾಸವಿದ್ದರು.
ಡೆತ್ನೋಟ್ ಬರೆದು ಆತ್ಮಹತ್ಯೆ
ಪತ್ನಿ, ಮಾವ ವಿರುದ್ಧ ಡೆತ್ನೋಟ್ ಬರೆದು ತಿಪ್ಪಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.’ ನಾನು ನನ್ನ ಹೆಂಡತಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಹೆಂಡತಿಯ ತಂದೆಯಾದ ಯಮುನಪ್ಪ ಇವನು ನನಗೆ ಜೀವ ಬೆದರಿಕೆ ಹಾಕಿರುತ್ತಾನೆ. ಗುರುವಾರ ಕರೆ ಮಾಡಿದಾಗ, ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಇಲ್ಲದಿದ್ದರೆ ನಾವೇ ನಿನ್ನ ಸಾಯಿಸುತ್ತೇವೆ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿದ್ದಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದಾರೆ.