ಹುತಾತ್ಮ ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಮೇಣದಬತ್ತಿ ಬೆಳಗುವ ಮೂಲಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರು ದೇಶದ ಹೆಮ್ಮೆಯ ವೀರ. ಇಂತಹ ವೀರಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶದ ಶಾಂತಿಯನ್ನು ಕದಡುವ ಉಗ್ರರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿರುವುದು ದೇಶಕ್ಕೆ ತುಂಬಲಾರದ ನಷ್ಟ, ಗಡಿಕಾಯುವ ನಮ್ಮ ದೇಶದ ಯೋಧರ ಜೋತೆ ನಾವೆಲ್ಲರೂ ಇದ್ದೇವೆ ಎಂಬುದೆ ಈ ಗೌರವ ಸಮರ್ಪಣೆ, ಸರ್ಕಾರ ಈ ನಮ್ಮ ಯೋಧರ ಬಲಿದಾನಕ್ಕೆ ತಕ್ಕ ಉತ್ತರ ನೀಡಲಿ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಂಜಪ್ಪ ಭಾವುಕರಾದರು.
ಕನ್ನಡ ಪರ ಹೋರಾಟಗಾರ್ತಿ ಪ್ರಮೀಳಾ ಮಹದೇವ್ ಮಾತನಾಡಿ, ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರು ನಮಗೆ ನಿಜವಾದ ನಾಯಕರು, ರಕ್ತಪಿಶಾಚಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿರುವ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರ ತ್ಯಾಗ ಯುವ ಪೀಳಿಗೆಗೆ ಮಾದರಿ. ದೇಶಕ್ಕಾಗಿ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರರಾದ ಅವರನ್ನು ಸ್ಮರಿಸಿ ಅವರ ದೇಶ ಪ್ರೇಮಕ್ಕೆ ನಮನ ಸಲ್ಲಿಸುವ ಮೂಲಕ ಪ್ರತಿಯೊಬ್ಬ ಯುವಕರಲ್ಲಿ ದೇಶಪ್ರೇಮ ಮೂಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜ್, ಪ್ರವೀಣ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.