ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದರು.
ದೇವಿಯ ದರ್ಶನ ಪಡೆದ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಬಾರಿ ಭಕ್ತಿಯಿಂದ ದೇವಿ ದರ್ಶನ ಪಡೆದು 2024-25 ರಲ್ಲಿ ರಾಜ್ಯಕ್ಕೆ ಉತ್ತಮ ಮಳೆ ಬೆಳೆಯಾಗಿ ರೈತರು ಸುಭಿಕ್ಷೆಯಿಂದ ಇರಲಿ ಎಂದು ಪ್ರಾರ್ಥಿಸಿದ್ದೆ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ತುಂಬಿವೆ. ಜಲಾಶಯಗಳಲ್ಲಿ ಶೇ.90ರಷ್ಟು ನೀರಿದ್ದು, ಉತ್ತಮ ಬೆಳೆಯಿಂದ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ರಾಜ್ಯದ 7 ಕೋಟಿ ಜನತೆಗೂ ಹಾಸನಾಂಬ ದೇವಿ ನೆಮ್ಮದಿ, ಸುಖ, ಶಾಂತಿ ನೀಡಲಿ ಎಂದರು. ಮುಂದಿನ ವರ್ಷವೂ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದರು.
ಸಮಾಜದಲ್ಲಿ ಅಸಮಾನತೆಯನ್ನು ತೊಡೆದ್ದು 2013 ರಿಂದ 18 ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮವನ್ನು ಬಡಜನರಿಗೆ ಜಾರಿ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ.
2023 ರಲ್ಲಿ ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ವರ್ಗದ ಬಡಜನರಿಗೆ ಆರ್ಥಿಕ ಸಾಮಾಜಿಕ ಶಕ್ತಿ ತುಂಬಲು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಪರಿಣಾಮವಾಗಿ ಅನುಷ್ಟಾನ ಮಾಡುವ ಮೂಲಕ ಬಡಜನತೆಗೆ ಶಕ್ತಿ ತುಂಬಿ ನ್ಯಾಯ ದೊರಕಿಸುವುದರ ಜೊತೆಗೆ ಅವರ ಜೀವನದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಾಸನ ನಗರ ಸಭೆಯನ್ನು ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹಾಸನ ವಿಮಾನ ನಿಲ್ದಾಣ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಹೇಮಾವತಿ ಜಲಾಶಯದ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾನವ ಪರಸ್ಪರ ಪ್ರೀತಿಸಬೇಕು ಎಂದರಲ್ಲದೆ ದ್ವೇಷವನ್ನು ಹತ್ತಿಕ್ಕುವ ಕೆಲಸ ಮಾಡಬೇಕು ಎಂದ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಬೇಕು ಟೀಕೆಗಳು ಸತ್ಯ ಆಧಾರದ ಮೇಲೆ ಇದ್ದರೆ ಅದಕ್ಕೆ ಅರ್ಥ ಬರುತ್ತದೆ ಎಂದರು.
ಅಧಿಕಾರಿಗಳು ಲಿಂಗಭೇದವಿಲ್ಲದೆ ಒಳ್ಳೆಯ ಕೆಲಸ ಮಾಡಬೇಕು ಎಂದರಲ್ಲದೆ, ಜನರಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಮಾತನಾಡಿ ಕಳೆದ ವರ್ಷ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ 14.75 ಲಕ್ಷ ಭಕ್ತಾಧಿಗಳು ದೇವಿ ದರ್ಶನ ಪಡೆದಿದ್ದಾರೆ. 9 ಕೋಟಿಗೂ ಹೆಚ್ಚು ಆದಾಯ ಬಂದಿರುತ್ತದೆ ಈ ಬಾರಿ 20 ಲಕ್ಷ ಭಕ್ತಾಧಿಗಳು ದೇವಿ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು 15 ಕೋಟಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ ಕಳೆದ ವರ್ಷ ಕೂಡ ಹಾಸನಾಂಬ ದೇವಿ ದರ್ಶನ ಪಡೆದಿದ್ದೆ ಆದರೆ ಈ ಬಾರಿ ಅತ್ಯುತ್ತಮ ಹಾಗೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವನ್ನು ಆಯೋಜನೆ ಮಾಡಲಾಗಿದೆ ಎಂದ ಅವರು ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದರು.
ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿAಗೇಗೌಡ ಅವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರ ನೇತೃತ್ವದಲ್ಲಿ ಹಾಸನಾಂಬ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ವಿಜೃಂಭಣೆಯಿAದ ಆಚರಿಸಲು ಜಿಲ್ಲಾಡಳಿತ ಕ್ರಮವಹಿಸಿ ಸೂಕ್ತ ವ್ಯವಸ್ಥೆಗಳನ್ನು ಭಕ್ತಾಧಿಗಳಿಗೆ ಕಲ್ಪಿಸಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಅವರು ಮಾತನಾಡಿ ಜಿಲ್ಲಾಡಳಿತ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿದೆ ರಾಜಣ್ಣ ಅವರು ತಮ್ಮ ಮನೆಯ ಕಾರ್ಯಕ್ರಮದಂತೆ ಉಸ್ತುವಾರಿ ವಹಿಸಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಕಾರಣಿಭೂತರಾಗಿದ್ದಾರೆ ಅವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದರು.
ವಿಮಾನ ನಿಲ್ದಾಣ ಕೆಲಸವನ್ನು ಪೂರ್ಣಗೊಳಿಸಲು ಹಾಗೂ ಹೇಮಾವತಿ ಜಲಾಶಯದ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮುಖ್ಯಮಂತ್ರಿಯವರಲ್ಲಿ ಸಂಸದರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಮಾತನಾಡಿ ಹಾಸನಾಂಬ ದೇವಿಯ ಜಗದ್ವಿಖ್ಯಾತಿ ಹೊಂದಿದ್ದು 6 ವಿದೇಶಗಳಲ್ಲಿಂದ ಟಿಕೆಟ್ ಬುಕ್ ಮಾಡಿ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಭಕ್ತಾಧಿಗಳು ಸುಗಮವಾಗಿ ದೇವಿ ದರ್ಶನ ಪಡೆಯಲು ಸಹಕಾರಿಯಾಗುವಂತೆ ಉಸ್ತುವಾರಿ ಸಚಿವರ ಒತ್ತಾಸೆಯಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಡೂರು ಶಾಸಕರಾದ ಆನಂದ್, ನಗರ ಸಭೆ ಅಧ್ಯಕ್ಷರಾದ ಚಂದ್ರೇಗೌಡ, ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮತ್ತಿತರರು ಹಾಜರಿದ್ದರು.