ಹಾಸನದಲ್ಲಿ ಹಠಾತ್ ಹೃದಯಾಘಾತ ಸಾವುಗಳ ಕುರಿತು ತಜ್ಞರ ಸಮಿತಿಯಿಂದ ವರದಿ ಪಡೆದಿದ್ದೇನೆ. ಮೇ ಮತ್ತು ಜೂನ್ ತಿಂಗಳಲ್ಲಿ ಒಟ್ಟು 24 ಸಾವುಗಳ ಬಗ್ಗೆ ತನಿಖೆ ನಡೆಸಲಾಗಿದ್ದು, 20 ಪ್ರಕರಣಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಳೆದ ವರ್ಷ ಇದೇ ಸಮಯದಲ್ಲಿ 19 ಹೃದಯಾಘಾತಗಳು ಹಾಸನದಲ್ಲಿ ಸಂಭವಿಸಿದ್ದವು. ಈ ವರ್ಷ 20 ಹೃದಯಾಘಾತ ಸಾವುಗಳಾಗಿದ್ದು, ಕಳೆದ ವರ್ಷಕ್ಕೆ ಹೊಲಿಸಿದಾಗ 1 ಸಾವು ಹೆಚ್ಚಳವಾಗಿದೆ. ಹೃದಯಾಘಾತಕ್ಕೆ ಈಡಾದವರಲ್ಲಿ14 ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಕಳವಳಕಾರಿ ಅಂಶ. ಇವರಲ್ಲಿ 6 ಜನರು ವಾಹನ ಚಾಲಕ ವರ್ಗಕ್ಕೆ ಸೇರಿದವರು. 20 ಸಾವುಗಳಲ್ಲಿ ಶೇ 30 ರಷ್ಟು ಹೃದಯಾಘಾತಗಳಿಗೆ ವಾಹನ ಚಾಲಕರು ಈಡಾಗಿದ್ದಾರೆ ಎಂಬುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದರು.
ಹೃದಯ ತಪಾಸಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದ್ದು, ವಾಹನ ಚಾಲಕರ ಕುರಿತು ಹೆಚ್ಚಿನ ಗಮನ ಹರಿಸಿ ಹೃದಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಇಸಿಜಿ ವ್ಯವಸ್ಥೆ ಕಲ್ಲಿಸುವ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.