ಹಾಲು ಖರೀದಿ ಧರ ಇಳಿಕೆ ಆದೇಶ ವಾಪಸು ಪಡೆದು ಉತ್ಪಾದಕರ ರಕ್ಷಣೆಗೆ ನಿಲ್ಲುವಂತೆ ಒಕ್ಕೂಟಕ್ಕೆ ಒತ್ತಾಯ

ಕೋಲಾರ: ಕೋಚಿಮುಲ್‌ ಒಕ್ಕೂಟವು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ಧರ ಲೀಟರ್ ಗೆ 2 ರೂಪಾಯಿ ಇಳಿಕೆ ಮಾಡಿರುವ ಆಡಳಿತ ಮಂಡಳಿ ನಿರ್ಧಾರವನ್ನು ಕೂಡಲೇ ವಾಪಸ್‌ ಪಡೆದು ಜಿಲ್ಲೆಯ ಹಾಲು ಉತ್ಪಾದಕರನ್ನು ರಕ್ಷಣೆಗೆ ಒಕ್ಕೂಟವು ನಿಲ್ಲುವಂತೆ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಅಮರೇಶ್ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಜನರ ಬದುಕು ಹೈನುಗಾರಿಕೆಯಾಗಿದೆ. ಇಲ್ಲಿನ ರೈತರು, ಕೂಲಿಕಾರರು ಹೈನುಗಾರಿಕೆಯನ್ನೇ ನಂಬಿ ತಮ್ಮ ಕುಟುಂಬಗಳ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಶು ಆಹಾರ ಸೇರಿದಂತೆ ಹೈನುಗಾರಿಕೆಗೆ ಬೇಕಾದ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ನಿಯಂತ್ರಿಸಲು ಸಾಧ್ಯವಾಗದ ಒಕ್ಕೂಟ ಮತ್ತು ಸರಕಾರಗಳು ರೈತರ ಹಾಲಿನ ಬೆಲೆ ಕಡಿಮೆ ಮಾಡಿರುವುದಕ್ಕೆ ಯಾವುದೇ ನೈತಿಕತೆ ಇಲ್ಲ. ಈ ಕೂಡಲೇ ಆದೇಶವನ್ನು ವಾಪಸು ಪಡೆಯುವಂತೆ ಒಕ್ಕೂಟವನ್ನು ಒತ್ತಾಯಿಸಿದರು.

ಕೋಲಾರ ಜಿಲ್ಲೆಯಲ್ಲಿ ಈ ವರ್ಷ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಬರಗಾಲದ ಪರಿಸ್ಥಿತಿ ಕಾಣುತ್ತಿದ್ದೇವೆ. ರಾಸುಗಳಿಗೆ ಮೇವಿನ ಕೊರತೆ ಜತೆಗೆ ಪಶು ಆಹಾರದ ಬೆಲೆ ಹೆಚ್ಚಳದಿಂದ ಉತ್ಪಾದಕರು ಜಾನುವಾರುಗಳನ್ನು ನಿರ್ವಹಣೆ ಮಾಡಿ ಹಾಲು ಉತ್ಪಾದಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭಗಳಲ್ಲಿ ಹಾಲಿನ ಬೆಲೆ ಕಡಿಮೆ ಮಾಡಿರುವುದು ಸರಿಯಲ್ಲ ಎಂದು ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿದರು.

ರೈತರು ಉತ್ಪಾದಿಸುವ ಹಾಲಿನ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಸ್ಥಾಪಿಸಲು ಸಾಧ್ಯವಾಗದ ಕೆಎಂಎಫ್‌ ಮತ್ತು ಕೋಚಿಮುಲ್ ಒಕ್ಕೂಟವು ಹೆಚ್ಚುವರಿ ಹಾಲಿನ ಸಂಗ್ರಹದ ಹೆಸರಿನಲ್ಲಿ ಏಕಾಏಕಿ ಹಾಲಿನ ದರ ಕಡಿಮೆ ಮಾಡಿದೆ. ಜೊತೆಗೆ ಗ್ರಾಹಕರಿಗೂ ಪ್ಯಾಕೆಟ್ ಮೇಲೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಿ 2 ರೂಪಾಯಿ ಹೆಚ್ಚಳ ಮಾಡಿದ್ದು ಅದು ಕೂಡ ಒಕ್ಕೂಟಕ್ಕೆ ಲಾಭವಾಗಿದೆ ಹೊರತು ಉತ್ಪಾದಕರಿಗೆ ಯಾವುದೇ ಲಾಭವಾಗಿಲ್ಲ ಇರುವ ಬೆಲೆಯಲ್ಲೇ ಕಡಿಮೆ ಮಾಡಿದ್ದಾರೆ ಎಂದು ದೂರಿದರು.

ರೈತರ ಮತ್ತು ಜಿಲ್ಲೆಯ ಹೈನುಗಾರಿಕೆಯ ಹಿತದೃಷ್ಟಿಯಿಂದ ಕೂಡಲೇ ಆಡಳಿತ ಮಂಡಳಿ ಹಾಲಿನ ದರ ಇಳಿಕೆಯ ಆದೇಶವನ್ನು ವಾಪಸ್‌ ಪಡೆದು ಇವತ್ತಿನ ಹೈನುಗಾರಿಕೆ ನಿರ್ವಹಣೆಗೆ ಅನುಗುಣವಾಗಿ ಪ್ರತಿ ಲೀಟರ್‌ ಹಾಲಿಗೆ ಕನಿಷ್ಠ 40 ರೂ ನಿಗದಿ ಮಾಡಬೇಕು ಮತ್ತು ಕೋಚಿಮುಲ್‌ ವತಿಯಿಂದ ಸರಬರಾಜು ಆಗುವ ಪಶು ಆಹಾರ ಬೆಲೆ ಕಡಿಮೆ ಮಾಡಲು ಕೋಚಿಮುಲ್‌ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಉಳಿವು ಕಷ್ಟವಾಗುತ್ತದೆ ಎಂದು ಸಿ.ಅಮರೇಶ್ ತಿಳಿಸಿದರು

Leave a Reply

Your email address will not be published. Required fields are marked *