ಹಾಲು ಖರೀದಿ ದರ ಏರಿಕೆಗೆ ಪ್ರಾಂತ ರೈತ ಸಂಘ ಒತ್ತಾಯ

ಕೋಲಾರ: ಹಾಲು ಉತ್ಪಾದಕರ ಖರೀದಿ ದರವನ್ನು ಐದು ರೂ ಏರಿಸಿ ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕೋಮುಲ್ ಆಡಳಿತ ವಿಭಾಗದ ವ್ಯವಸ್ಥಾಪಕ ನಾಗೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ, ಕೃಷಿ ರಂಗದಲ್ಲಿ ಹೈನುಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಹೈನುಗಾರಿಕೆ ಬಹುತೇಕ ರೈತಾಪಿ ಕೃಷಿ ಕೂಲಿಕಾರರ ಕುಟುಂಬಗಳ ಆರ್ಥಿಕ ಮೂಲವು ಆಗಿದೆ. ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಈ ಕ್ಷೇತ್ರವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ರಾಜ್ಯದ ಕೆಎಂಎಫ್ ಅಡಿಯಲ್ಲಿ 16 ಹಾಲು ಒಕ್ಕೂಟಗಳು ಇದ್ದು 14900 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ 22.5 ಲಕ್ಷ ಸದಸ್ಯರಿಂದ ಪ್ರತಿದಿನ 90 ಲಕ್ಷ ದಿಂದ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ದಿನೇ ದಿನೇ ಹೆಚ್ಚುತ್ತಿರುವ ಪಶು ಆಹಾರ ಬೆಲೆ ಏರಿಕೆ, ಪಶುಗಳ ಖರೀದಿ ದರ, ನಿರ್ವಹಣೆ ಹಾಗೂ ಇನ್ನಿತರೆ ಕಾರಣಗಳಿಂದ ಲೀಟರ್ ಹಾಲಿನ ಉತ್ಪಾದನಾ ವೆಚ್ಚವು ಸರಿಸುಮಾರು 45 ರೂ. ಖರ್ಚು ಬರುತ್ತಿದೆ ಒಕ್ಕೂಟ ನೀಡುವ ಹಣ ಸಾಲದಾಗಿದೆ ಎಂದರು.

ರಾಜ್ಯದ ಕೆ.ಎಂ.ಎಫ್.ಗಳು ಜಿಲ್ಲಾ ಒಕ್ಕೂಟಗಳು ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ಸೇರಿ 36 ರೂ. ಉತ್ಪಾದಕರಿಗೆ ಪಾವತಿಸಲಾಗುತ್ತಿದ್ದು. ಈ ಹಣದಲ್ಲಿಯೂ ಪ್ರತಿ ಲೀಟರ್ ಮೇಲೆ 8 ರಿಂದ 9 ರೂ. ನಷ್ಟವಾಗುತ್ತಿದೆ. ಇತ್ತೀಚೆಗೆ ನಡೆದ ಕೋಮುಲ್ ಸರ್ವ ಸದಸ್ಯರ ಸಭೆಯಲ್ಲಿ ಹಾಲಿನ ದರವನ್ನು ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರೂ ಇಲ್ಲಿನ ತನಕ ಏರಿಕೆ ಮಾಡಿಲ್ಲ. ಆದ್ದರಿಂದ ಕೂಡಲೇ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಐದು ರೂ ಏರಿಸಬೇಕು ಪಶು ಆಹಾರ ಗುಣಮಟ್ಟ ಕಾಯ್ದುಕೊಳ್ಳಬೇಕು ಪಶು ಆಹಾರಗಳ ಬೆಲೆ ಇಳಿಸಿ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಕೆ.ಎಂ.ಎಫ್‌ನಿಂದ ಸಬ್ಸಿಡಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಿಶ್ರತಳಿ ರಾಸುಗಳಲ್ಲಿ ಶೇ.4.0 ರಷ್ಟು ಕೊಬ್ಬಿನಾಂಶ ಬಂದಿರುವುದಿಲ್ಲವೆಂದು ಎನ್.ಡಿ.ಆರ್.ಐ. ವಿಜ್ಞಾನಿಗಳ ವರದಿಯಲ್ಲಿ ತಿಳಿಸಿದ್ದರೂ ಕನಿಷ್ಠ 4.0 ಕೊಬ್ಬಿನಾಂಶವನ್ನು ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ದುಡಿಯುವ ನೌಕರರಿಗೆ ಸೇವಾ ಭದ್ರತೆ ಇತ್ಯಾದಿ ಸೌಲಭ್ಯಗಳನ್ನು ಖಾತ್ರಿ ಮಾಡಬೇಕು ಪ್ರಾಥಮಿಕ ಸಹಕಾರ ಸಂಘಗಳು ಸರಬರಾಜು ಮಾಡುವ ಹಾಲಿಗೆ ಒಕ್ಕೂಟದಿಂದ ನೀಡುವ ಬಿಲ್‌ಗಳನ್ನು ಸರಿಯಾದ ಸಮಯಕ್ಕೆ ನೀಡಬೇಕು ಬಿಎಂಸಿಗಳಿಗೆ ಬರುವ ಲಾಭಂಶವನ್ನು ಪ್ರಾಥಮಿಕ ಸಹಕಾರ ಸಂಘಗಳಿಗೆ ಶೇಕಡವಾರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎನ್.ಎನ್.ಶ್ರೀರಾಮ್, ತಾಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ಹೊಲ್ಲಂಬಳ್ಳಿ ವೆಂಕಟೇಶಪ್ಪ, ಮಂಜುನಾಥ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!