ಹಾಲಿ ಶಾಸಕ ವೆಂಕಟರಮಣಯ್ಯಗೆ ಟಿಕೆಟ್ ಬೇಡ;‌ ಟಿಕೆಟ್ ಕೊಟ್ಟರೆ ಸೋಲಿಸುತ್ತೇವೆ- ಸ್ವಾಭಿಮಾನಿ ಕಾಂಗ್ರೆಸ್ ಟೀಮ್ ಎಚ್ಚರಿಕೆ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಈ ಕಾಂಗ್ರೆಸ್ ಭದ್ರಕೋಟೆಗೆ ಸೂಕ್ತ ಅಭ್ಯರ್ಥಿ ಬೇಕಿದೆ. ಹತ್ತು ವರ್ಷದಿಂದ ಶಾಸಕರಾಗಿರುವ ವೆಂಕಟರಮಣಯ್ಯಗೆ ಜನ ವಿರೋಧಿ ಅಲೆ ಸೃಷ್ಟಿಯಾಗಿದೆ, ಹೀಗಾಗಿ ಅಭ್ಯರ್ಥಿ ಬದಲಿಸುವಂತೆ ಹೈಕಮಾಂಡ್ ಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದರೆ ಯಾವುದೇ ಅಭ್ಯಂತರವಿಲ್ಲ, ನಾವು ಗೆಲ್ಲಿಸಿ ಕಳಿಸುತ್ತೇವೆ ಎಂದು ಸ್ವಾಭಿಮಾನ ಕಾಂಗ್ರೆಸ್ ತಂಡದ ಮುಖಂಡರಾದ ತಿ.ರಂಗರಾಜು, ಎಂ.ಜಿ ಶ್ರೀನಿವಾಸ ಹೇಳಿದರು.

ನಗರ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದು ಬೇಡ, ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲಿ ನಾವು ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಿ ಕಳಿಸುತ್ತೇವೆ.

ಒಂದು ವೇಳೆ ಮತ್ತೊಮ್ಮೆ ಹಾಲಿ ಶಾಸಕರಿಗೆ ಮಣೆ ಹಾಕಿದರೆ ಕಾಂಗ್ರೆಸ್ ಭದ್ರಕೋಟೆಯಾಗಿರುವ ದೊಡ್ಡಬಳ್ಳಾಪುರ ಕ್ಷೇತ್ರ ಕೈಜಾರಲಿದೆ ಆದ್ದರಿಂದ ಸಿದ್ದರಾಮಯ್ಯ ಕೇವಲ ನಾಮಿನೇಷನ್ ಹಾಕಲಿ, ನಾವು ಗೆಲ್ಲಿಸುತ್ತೇವೆ. ಸಿದ್ದರಾಮಯ್ಯನವರೇ ನೀವೇ ಬನ್ನಿ ಇಲ್ಲವಾದರೆ ಅಭ್ಯರ್ಥಿ ಬದಲಿಸಿ ಎಂದು ಮನವಿ ಮಾಡಿದರು.

ಸರ್ವೆಗಳಲ್ಲಿ ಸೋಲುವ ಭೀತಿ:

ಕೇಂದ್ರ ಮತ್ತು ರಾಜ್ಯ ನಾಯಕರು ನಡೆಸಿರುವ ವರದಿಗಳಲ್ಲೂ ಹಾಲಿ ಶಾಸಕರಿಗೆ ಸೋಲುವ ಭೀತಿ ಎದುರಾಗಿದೆ. ಈ ಬಗ್ಗೆ ಹೈಕಮಾಂಡ್ ಸೂಕ್ಷ್ಮವಾಗಿ ಚಿಂತಿಸಿ ಕ್ರಮ ತೆಗೆದುಕೊಳ್ಳಬೇಕು. ಶಾಸಕ ವೆಂಕಟರಮಣಯ್ಯಗೆ ಟಿಕೆಟ್ ನೀಡಿದರೆ ನಾವೇ ಸೋಲಿಸುತ್ತೇವೆ ಎಂದು ಮುಖಂಡ ಎಂಜಿ ಶ್ರೀನಿವಾಸ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧೆ ಬೇಡ:

ಶಾಸಕ ವೆಂಕಟರಮಣಯ್ಯನವರೇ ದಯವಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಬೇಡಿ ಖಚಿತವಾಗಿ ಸೋಲುತ್ತೀರಾ, ನಾವೇ ನಿಮ್ಮ ವಿರುದ್ಧ ಮತಯಾಚನೆ ಮಾಡಿ ನಿಮ್ಮನ್ನು ಸೋಲಿಸುತ್ತೇವೆ ಎಂದು ಹಿರಿಯ ಮುಖಂಡ ತಿ.ರಂಗರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮೇಲೆ ವಿಶ್ವಾಸವಿದೆ:

ಪಕ್ಷದ ರಾಜ್ಯ ನಾಯಕರ ಮೇಲೆ ನಮಗೆ ಬಲವಾದ ವಿಶ್ವಾಸ, ನಂಬಿಕೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣವಿದೆ. ಇಂತಹ ಸಮಯದಲ್ಲಿಯೂ ಸೋಲುವ ಭೀತಿಯಲ್ಲಿರುವ ಶಾಸಕ ವೆಂಕಟರಮಣಯ್ಯಗೆ ಟಿಕೆಟ್ ನೀಡುವುದು ಬೇಡ. ಬೇರೆ ಯಾರೇ ಅಭ್ಯರ್ಥಿಯಾದರೂ ನಾವು ಗೆಲ್ಲಿಸುತ್ತೇವೆ. ಪಕ್ಷದ ಹೈಕಮಾಂಡ್ ನಡೆಸಿರುವ ಸರ್ವೆಯ ಮಾನದಂಡದಂತೆ ಪಾರದರ್ಶಕವಾಗಿ ಟಿಕೆಟ್ ಹಂಚಿಕೆ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದರು. ಸೂಕ್ತ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ನೀಡಿ ಕಾಂಗ್ರೆಸ್ ಉಳಿಸಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ಬಿ.ಎಚ್ ಕೆಂಪಣ್ಣ, ವೆಂಕಟರಾಮ್, ಪ್ರಕಾಶ್, ಆನಂದ್ ಕುಮಾರ್, ರಾಘವೇಂದ್ರ, ಕಸವನಹಳ್ಳಿ ಅಂಬರೀಶ್, ಮನ್ಸೂರ್, ಸಿದ್ದಬೈರೇಗೌಡ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *