ಕ್ಷೇತ್ರದ ಹಾಲಿ ಶಾಸಕ ಇನ್ನೂ ಅಂಬಾಸಿಡರ್ ಕಾರಿನ ಕಾಲದಲ್ಲೇ ಇದ್ದಾರೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿ ಹೈಟೆಕ್ ತಂತ್ರಜ್ಞಾನವುಳ್ಳ ಕಾರಿನ ಕಾಲದಲ್ಲಿ ಇದ್ದು ಆ ನಿಟ್ಟಿನಲ್ಲಿ ಚಿಂತನೆ ಮಾಡಿ ಕ್ಷೇತ್ರ ಅಭಿವೃದ್ಧಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆ, ಐಡಿಯಾಲಜಿ, ಅಭ್ಯರ್ಥಿ ಕುರಿತು ಜನರಿಗೆ ಅರಿವು ಮೂಡಿಸಬೇಕು, ಬಿಜೆಪಿಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕೊಡಲಾಗುತ್ತದೆ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ಪಕ್ಷ ಬಿಜೆಪಿ ಎಂದರು.
ಪಕ್ಷಕ್ಕೆ ಕೆಲವರು ಬರುತ್ತಾರೆ. ಕೆಲವರು ಹೋಗುತ್ತಾರೆ. ಆದರೆ ಪಕ್ಷ ಬೆಳೆಯುತ್ತಲೇ ಇರುತ್ತದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ ಎಂದರು. ರಾಜ್ಯದಲ್ಲಿ ಕನಿಷ್ಠ 130 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಧೀರಜ್ ಮುನಿರಾಜ್ ಅವರನ್ನು ಹೆಚ್ಚು ಬಹುಮತದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಪಕ್ಷದ ಚಿಂತನೆ, ಕಾರ್ಯಯೋಜನೆ, ಅಭಿವೃದ್ಧಿ ಕಾರ್ಯ, ಯೋಜನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು, ಗ್ರಾಮೀಣ ಭಾಗದಲ್ಲಿ ಖುದ್ದಾಗಿ ನಾವೇ ಮನೆ ಮನೆಗೆ ಹೋಗಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಮಾತನಾಡಿ ಶೇ. 99 ರಷ್ಟು ಮುಖಂಡರು, ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಕೆಲಸ ಮಾಡುತ್ತಾರೆ.
ಕೇವಲ 1% ನಷ್ಟು ಮಾತ್ರ ಆಮಿಷಕ್ಕೆ ಒಳಾಗಾಗಿ ಪಕ್ಷ ಬಿಟ್ಟು ಹೋಗುತ್ತಾರೆ. ಪಕ್ಷದ ನಿಷ್ಠಾವಂತರಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಅದಕ್ಕೆ ಉದಾಹರಣೆ ನಾನು, ಒಬ್ಬ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ ಎಂದರು.
ಎಲ್ಲರೂ ಒಗ್ಗಟ್ಟಾಗಿ, ಕ್ರಮಬದ್ಧವಾಗಿ ಚುನಾವಣೆಯನ್ನು ಎದುರಿಸಿದರೆ ಖಚಿತವಾಗಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗುಜರಾತ್ ಮಾಜಿ ಗೃಹ ಮಂತ್ರಿ ದೇವುಸಿನ್ ಚೌಹಾನ್, ರಾಜಸ್ಥಾನ ವಿರೋಧ ಪಕ್ಷದ ನಾಯಕ ಸತೀಶ್ ಪೂನಿಯಾ, ಎಂಎಲ್ಸಿ ಅ.ದೇವೇಗೌಡ, ಸಂಘಟನಾ ಕಾರ್ಯದರ್ಶಿ ಕಾಂತರಾಜು, ಹನುಮಂತರಾಯಪ್ಪ ಇದ್ದರು.