ಹಾಲಿನ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಹಾಲಿನ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು, ಹಸುಗಳನ್ನು ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡಿದೆ. ಅದರಲ್ಲಿಯೂ 50 ಮಿ.ಲೀ ಹಾಲನ್ನು ಕೊಟ್ಟಂತೆ ಮಾಡಿ ಪ್ರತಿ ಹಾಲಿನ ಪ್ಯಾಕೆಟ್ ಮೇಲೆ 2.10 ರೂ. ಹೆಚ್ಚಳ ಮಾಡಿರುವುದು ಮನೆ ಮುರುಕ ನಿರ್ಧಾರವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರಕಾರ ಹಾಲಿನ ದರ ಹೆಚ್ಚು ಮಾಡಿರುವುದು ಮನೆ ಮುರುಕ ನಿರ್ಧಾರ. ಕೇವಲ 50 ಮಿಲಿ ಲೀಟರ್ ಹೆಚ್ಚು ಹಾಲು ಬೇಕು ಎಂದು ಯಾರು ಕೇಳಿದ್ದರು. ಜನರು ಕೇಳಿದ್ದನ್ನು ಮೊದಲು ಕೊಡಿ. ರಾಜ್ಯ ಸರ್ಕಾರಕ್ಕೆ ಜ್ವರ ಬಂದರೆ, ರಾಜ್ಯದ ಜನತೆಗೆ ಬರೆ ಹಾಕುತ್ತಿದೆ. ಇದು ಬರೆ ಹಾಕುವ ಸರ್ಕಾರ. ಜನರ ವಿರೋಧಿ ಸರಕಾರ. ನೀವು ಹಾಲಿನ ಬೆಲೆ ಹೆಚ್ಚಳ ಮಾಡಿದ್ದಕ್ಕೆ ಕಾಫಿ, ಟೀ ಬೆಲೆಗಳು ಕೂಡ ಹೆಚ್ಚಳ ಆಗತ್ತಿದೆ. ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಡೀಸೆಲ್, ಪೆಟ್ರೋಲ್ ದರವನ್ನೂ ಹೆಚ್ಚಳ ಮಾಡಿದ್ದಾರೆ. ಇದರಿಂದ ಸರಕು ಸಾಗಣೆ ಬೆಲೆ ಹೆಚ್ಚಳವಾಗಿದೆ. ಸರಕಾರ ರಾಜ್ಯದ ಜನ ಜೀವನದ ಮೇಲೆ ಚೆಲ್ಲಾಟ ಆಡುತ್ತಿದೆ. ನೀವು ಬೆಲೆ ನಿಯಂತ್ರಣ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು ನೀವು ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಸರಕಾರಕ್ಕೆ ಮನುಷ್ಯತ್ವ ಇದ್ದರೆ ಬೆಲೆಗಳನ್ನು ಇಳಿಕೆ ಮಾಡಿ. ಇನ್ನು ಸಿದ್ದರಾಮಯ್ಯ ದೀನ ದಲಿತರ ಪರ ಎನ್ನುತ್ತಿದ್ದರು. ಆದರೆ, ಈ ಸರಕಾರ ದೀನ ದಲಿತರ ಪರ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಈ ಸರಕಾರ ವಿದ್ಯಾರ್ಥಿಗಳು, ರೈತರ ಖಾತೆಗೆ ಹಣ ಹಾಕಲ್ಲ. ಯಾರ ಖಾತೆಗೆ ಹಣ ಹಾಕಿದರೆ ತನಗೆ ವಾಪಸ್ ಕೊಡುತ್ತಾರೋ ಅಂತವರ ಖಾತೆಗೆ ಹಣ ಹಾಕುತ್ತಾರೆ. ರಾಜ್ಯದಲ್ಲಿ ಡೆಂಗ್ಯೂ ಮನೆ ಮನೆಗೆ ಹಬ್ಬಿದೆ. ಕೇಳೊದಕ್ಕೆ ಡಾಕ್ಟರ್ ಇಲ್ಲ. ಚಿಕಿತ್ಸೆ ಪಡೆದುಕೊಂಡರೆ ಔಷಧ ಇಲ್ಲ. ವೈದ್ಯಕೀಯ ಸಚಿವರು ನಾಪತ್ತೆ ಆಗಿದ್ದಾರೆ ಎಂದು ಆರೋಪ ಮಾಡಿದರು.

ಈ ವೇಳೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *