ಕೋಲಾರ: ರೈತರ ಹಾಗೂ ಗ್ರಾಹಕರ ವಿರೋಧಿಯಾಗಿರುವ ರಾಜ್ಯದ ಹಾಪ್ ಕಾಮ್ಸ್ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ಹಮ್ಮಿಕೊಂಡಿರುವ ಬೆಂಗಳೂರಿನ ಲಾಲ್ ಬಾಗ್ ಮುತ್ತಿಗೆಗೆ ಜಿಲ್ಲೆಯ ರೈತ ಮೋರ್ಚಾ ಪದಾಧಿಕಾರಿಗಳು ಹಾಗೂ ಪ್ರಗತಿಪರ ರೈತರು ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಿಂದ ತೆರಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಿವಣ್ಣ ಮಾತನಾಡಿ ಸರ್ಕಾರಿ ಸ್ವಾಮ್ಯದ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಮುಂಚುವ ಹಂತಕ್ಕೆ ತಲುಪಿದೆ ಕಳೆದ ಐದು ವರ್ಷಗಳಲ್ಲಿ ಸುಮಾರು 140 ಮಳಿಗೆಗಳನ್ನು ಮುಚ್ಚಲಾಗಿದ್ದು ಇದರಿಂದಾಗಿಯೇ ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿದೆ ಇದಕ್ಕೆ ಕಾರಣವಾದವರ ವಿರುದ್ದ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ನಗರ ಘಟಕದ ಉಪಾಧ್ಯಕ್ಷ ಕೆ.ಅಮರೇಶ್ ಮಾತನಾಡಿ ರಾಜ್ಯದ ಹಾಪ್ ಕಾಮ್ಸ್ ಸಂಸ್ಥೆಯು ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಾಗಿ ಇವತ್ತು ನಿಷ್ಕ್ರಿಯವಾಗಿದೆ ಜೊತೆಗೆ ದಲ್ಲಾಳಿಗಳ ಕೂಪವಾಗಿದೆ ಸಂಸ್ಥೆಯನ್ನು ಕೂಡಲೇ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ನಾರಾಯಣಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ವೇಣುಗೋಪಾಲ್, ಸತೀಶ್ ರೆಡ್ಡಿ, ನಾರಾಯಣಸ್ವಾಮಿ, ವಿಜಯ ಭಾಸ್ಕರ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಶ್ರೀರಾಮಪ್ಪ, ನಗರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯದರ್ಶಿ ಶ್ರೀಧರ್, ಕೆಜಿಎಫ್ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ರೆಡ್ಡಿ, ಮುಖಂಡರಾದ ಓಹಿಲೇಶ್, ಪವನ್ ಚಂದ್ರಶೇಖರ್ ಗೌಡ ಹಾಗೂ ಪ್ರಗತಿಪರ ರೈತ ಮುಂತಾದವರು ಇದ್ದರು.