ಹಾದ್ರಿಪುರದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ: ಬಿಇಒ ಸೈಯಿದಾ ಅನೀಸ್ ಕಾರ್ಯಕ್ರಮಕ್ಕೆ ಚಾಲನೆ

ಆಧುನಿಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬ ಮಗು ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಬೇಕು ಮತ್ತು ಕೌಶಲ್ಯ ಸಂಪಾದನೆಗೆ ಆದ್ಯತೆ ನೀಡಬೇಕು ಎಂದು ಬಿಇಒ ಸೈಯಿದಾ ಅನೀಸ್ ಅವರು ತಿಳಿಸಿದರು.

ತಾಲೂಕಿನ ಹಾದ್ರಿಪುರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ದೊಡ್ಡಬೆಳವಂಗಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿಗಳು, ಕ್ರೀಡಾಕೂಟಗಳು ಉತ್ತಮ ವೇದಿಕೆಗಳಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಮನೋಭಾವದ ಜೊತೆಗೆ ಕೌಶಲ್ಯ ಕಲಿಕೆಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಹೊಸ ಹೊಸ ವಿಷಯಗಳನ್ನು ಮತ್ತು ಕೌಶಲ್ಯಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.

ಶಾಲೆ, ಕ್ಲಸ್ಟರ್ ಹಂತದಲ್ಲಿ ನಡೆಯುವ ಕಾರ್ಯಕ್ರಮಗಳು ಯಶಸ್ವಿಯಾಗಲು ಗ್ರಾಮಸ್ಥರು, ಪೋಷಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ದೊಡ್ಡಬೆಳವಂಗಲ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ಮಾತನಾಡಿ, ಪ್ರತಿಭಾ ಕಾರಂಜಿಗಳು, ಕ್ರೀಡಾಕೂಟಗಳು, ವಿಜ್ಞಾನ ಪ್ರಯೋಗಗಳು ಮಕ್ಕಳ ವಿಶೇಷ ಕೌಶಲ್ಯಗಳನ್ನು ಹೊರತರುವುದು ಮಾತ್ರವಲ್ಲದೆ, ಮಕ್ಕಳನ್ನು ಕಲಿಕೆಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಬೇಕಿದೆ ಎಂದರು.

ಪ್ರತಿ ವರ್ಷ ಒಂದೊಂದು ಗ್ರಾಮದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆದರೆ, ಮಕ್ಕಳ ಪ್ರತಿಭೆಗೆ ಅವಕಾಶ, ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಪೋಷಕರು ಮಕ್ಕಳಿಗೆ ಕಲಿಕೆಯ ಜತೆಗೆ ವಿವಿಧ ಕಲೆಗಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸುವ ಮೂಲಕ ವಿಶೇಷ ರೀತಿಯಲ್ಲಿ ಸಾಧನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಾದ್ರಿಪುರ ಗ್ರಾಪಂ ಅಧ್ಯಕ್ಷ ಸತೀಶ್ ಕುಮಾರ್, ಸದಸ್ಯರಾದ ದೇವರಾಜು, ಸುಷ್ಮಾ, ದೊಡ್ಡಬೆಳವಂಗಲ ಗ್ರಾಪಂ ಅಧ್ಯಕ್ಷೆ ಅನುರಾಧ, ಹಾದ್ರಿಪುರ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಹನುಮಂತರಾಜು, ಶಿಕ್ಷಣ ಸಂಯೋಜಕ ಭೀಮರಾಜ್, ಕ್ಲಸ್ಟರ್ ಹಂತದ ಸಿಆರ್‌ಪಿ ವೆಂಕಟೇಶ್, ಹಾದ್ರಿಪುರ ಶಾಲೆಯ ಮುಖ್ಯಶಿಕ್ಷಕ ವಿರೂಪಾಕ್ಷಯ್ಯ, ಮಧುರನ ಹೊಸಹಳ್ಳಿ ಗ್ರಾಮದ ಸದಸ್ಯೆ ಶಿಲ್ಪಾ, ಶಾಲಾ ಸಿಬ್ಬಂದಿ ವರ್ಗ ಮತ್ತು ಹಾದ್ರಿಪುರ ಗ್ರಾಮಸ್ಥರು ಹಾಗೂ ದೊಡ್ಡಬೆಳವಂಗಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!