ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ 2ನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಹೆಚ್.ಎ ನಾಗರಾಜು ಮತ್ತು ರಮ್ಯಾ ಸಿ.ಹೆಚ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹಾಗೂ ಹನುಮಂತರಾಯಪ್ಪ ಮತ್ತು ಗಂಗರತ್ನಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದರು.
ಹದಿನೈದು ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಜೆಡಿಎಸ್ ಅಭ್ಯರ್ಥಿ ಹೆಚ್.ಎ ನಾಗರಾಜ್ ಅವರಿಗೆ 11 ಮಂದಿ ಸದಸ್ಯರು ಮತ ನೀಡಿ, 4 ಜನ ಕಾಂಗ್ರೆಸ್ ಅಭ್ಯರ್ಥಿ ಹನುಮಂತರಾಯಪ್ಪ ಪರವಾಗಿ ಮತ ಚಲಾವಣೆ ಮಾಡಿದ್ದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಮ್ಯಾ ಸಿ.ಹೆಚ್ ಅವರಿಗೆ 9 ಮಂದಿ ಬೆಂಬಲಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಗಂಗರತ್ನಮ್ಮ ಅವರಿಗೆ 6 ಮಂದಿ ಮತ ನೀಡಿದ್ದರು.
ಈ ಹಿನ್ನೆಲೆ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎನ್.ಗಿರಿಜಾಂಬ ಪ್ರಕಟಿಸಿದ ನಂತರ ಜೆಡಿಎಸ್ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜು ಮತ್ತು ಉಪಾಧ್ಯಕ್ಷರಾದ ರಮ್ಯಾ ಅವರಿಗೆ ಗಣ್ಯರಿಂದ ಅಭಿನಂದನೆಗಳು ಸಲ್ಲಿಸಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ, ಕುರುವಿಗೆರೆ ನರಸಿಂಹಯ್ಯ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾರಾಯಣಪ್ಪ, ಚುನಾವಣಾ ಅಧಿಕಾರಿ ಗಿರಿಜಾಂಬ ಎನ್, ದೇವನಹಳ್ಳಿ ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ದೇವರಾಜ್, ಮಂಜುನಾಥ್. ತೂಬಗೆರೆ ಹೋಬಳಿಯ ಜೆಡಿಎಸ್ ಅಧ್ಯಕ್ಷರಾದ ಜಗನ್ನಾಥ, ಜೆಡಿಎಸ್ ಮುಖಂಡರಾದ ಗೌರೀಶ್ ರಾಮಣ್ಣ, ಮುದ್ದುಕೃಷ್ಣಪ್ಪ, ಪುರುಷೋತ್ತಮ್, ಉದಯ ಆರಾಧ್ಯ ಮತ್ತಿತರರು ಭಾಗವಹಿಸಿದ್ದರು