ಹಸುಗಳ ಕೆಚ್ಚಲು ಕೊಯ್ದು ಅಮಾನವೀಯ ಕೃತ್ಯ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮಕ್ಕೆ ಕೊಮ್ಮನಹಳ್ಳಿ ಆನಂದ್ ಆಗ್ರಹ

ಕೋಲಾರ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸ ಮನಸ್ಥಿತಿಯ ದುಷ್ಕರ್ಮಿಗಳು ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿರುವುದು ಅತ್ಯಂತ ಹೇಯ ಅಮಾನುಷ ಕೃತ್ಯವಾಗಿದ್ದು ವಿಕೃತಿ ಮೆರೆದಿರುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಘಟನೆ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಅದಕ್ಕೆ ಇಂತಹ ಘಟನೆಗಳೇ ಜೀವಂತ ಸಾಕ್ಷಿಯಾಗಿವೆ ಹಾಲು ಕೊಡುವ ಹಸುಗಳ ಕೆಚ್ಚಲು ಕೊಯ್ದು ಕಾಲಿಗೆ ಮಚ್ಚಿನಿಂದ ಹೊಡೆದಿದ್ದರೂ ಕ್ರಮ ವಹಿಸಿಲ್ಲ ಮಾನವೀಯತೆ ಇಲ್ಲದ ಕ್ರೂರಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ ಇಷ್ಟು ದಿನ ಜನರಿಗೆ ರಕ್ಷಣೆ ಇಲ್ಲವಾಗಿತ್ತು ಈಗ ಗೋವುಗಳಿಗೂ ರಕ್ಷಣೆ ಇಲ್ಲವಾಗಿದೆ ಎಂದು ಆರೋಪಿಸಿದರು.

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಸುವಿನ ಹಾಲು ಅವಶ್ಯಕತೆ ಇದೆ ಮನುಷ್ಯನ ಹಸಿವಿನ ಕೊರತೆ ನೀಗಿಸುವ ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ನೀಚರಿಗೆ ಕಾಂಗ್ರೆಸ್ ಸರ್ಕಾರವು ಬೆಂಬಲವಾಗಿ ನಿಂತಿದೆ ಎಂಬುದು ಅನುಮಾನ ಮೂಡುತ್ತದೆ ಹಿಂದೂಗಳ ಹಾಗೂ ಗೋವುಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರ ಕಛೇರಿಗಳ ಮುಂದೆ ಹಸುಗಳ ಸಮೇತ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!