ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಅನ್ನಭಾಗ್ಯ ಯೋಜನೆ: 5 ಕೆ.ಜಿ ಅಕ್ಕಿ ಹಾಗೂ ತಲಾ 170 ರೂ. ನಗದು ವರ್ಗಾವಣೆಗೆ ಚಾಲನೆ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಐದು ಗ್ಯಾರಂಟಿಗಳಲ್ಲಿ ಅತ್ಯಂತ ಪ್ರಮುಖವಾದ “ಅನ್ನ ಭಾಗ್ಯ” ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ತಲಾ 170 ರೂ. ನಗದು ವರ್ಗಾವಣೆಗೆ ಆಗಲಿದೆ.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ 15 ದಿನಗಳಲ್ಲಿ 1.28 ಕೋಟಿ ಪಡಿತರ ಕುಟುಂಬಗಳಿಗೆ ನೇರವಾಗಿ ನಗದು ವರ್ಗಾವಣೆ ಆಗಲಿದೆ. ಈ ಯೋಜನೆಗ ಅನುಷ್ಠಾನಕ್ಕಾಗಿ ಪ್ರಸ್ತುತ ಬಜೆಟ್‌ನಲ್ಲಿ 10 ಸಾವಿರ ಕೋಟಿ ಹಣ ನಿಗದಿ ಮಾಡಲಾಗಿದೆ ಎಂದರು.

ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆಯಾಗಿ ಕೊಡುತ್ತಿರಲಿಲ್ಲ. ಕೆ.ಜಿ ಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕರ್ನಾಟಕದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ? ಎಂದು ಪ್ರಶ್ನೆ ಮಾಡಿದರು.

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ?
ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Leave a Reply

Your email address will not be published. Required fields are marked *