ಗೌರಿಬಿದನೂರು:- ಚಿಕ್ಕ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಸತ್ಯನಾರಾಯಣ (45) ಲೇಟ್ ವೆಂಕಟರಮಣಪ್ಪ ಇವರು ನಗರದ ಕಲ್ಲುಡಿ ಗ್ರಾಮದಲ್ಲಿರುವ ಸಿ.ಬಿ ಮೋಟಾರ್ ಸರ್ವಿಸ್ ಸ್ಟೇಷನ್ ನಲ್ಲಿ ತಮ್ಮ ಬೈಕ್ ಅನ್ನು ರಿಪೇರಿಗೆ ಬಿಟ್ಟಿದ್ದು ಬೈಕ್ ರಿಪೇರಿ ಆದ ಬಳಿಕ ಮೆಕಾನಿಕ್ ಚೇತನ್ ಎಲ್ (21) ಬಿನ್ ಲಕ್ಷ್ಮೀನಾರಾಯಣಪ್ಪ ಎಂಬ ಹುಡುಗ ರಿಪೇರಿಯ ಹಣವನ್ನು ಕೇಳುವ ಸಮಯದಲ್ಲಿ ಚೇತನ್ ಮತ್ತು ಸತ್ಯನಾರಾಯಣ್ ನಡುವೆ ಮಾತಿನ ಚಕಮಕಿ ಮತ್ತು ಗಲಾಟೆ ನಡೆದಿದೆ.
ಕಳೆದ ಅ.25ರ ಬುಧವಾರದಂದು ಚೇತನ್ ಆತನ ಸ್ನೇಹಿತರಾದ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಜ್ವಾಲೆಂದ್ರ ಬಿನ್ ಅಶ್ವತಪ್ಪ (22) ಮತ್ತು ಚೇತನ್ ಕೆ.ಹೆಚ್ ಬಿನ್ ಹನುಮಂತರಾಯಪ್ಪ (23) ಎಂಬ ಇಬ್ಬರು ಸ್ನೇಹಿತರಿಗೆ ಹಣದ ವಿಷಯ ತಿಳಿಸಿರುತ್ತಾನೆ.
ಬುಧವಾರ ಸಂಜೆ 5 ಗಂಟೆ ಸಮಯದಲ್ಲಿ ಹೊಲದ ಕೆಲಸ ಮುಗಿಸಿಕೊಂಡು ಮನೆ ಬಳಿ ಕುಳಿತಿದ್ದ ಸತ್ಯನಾರಾಯಣ ರವರನ್ನು ಜ್ವಾಲೆಂದ್ರ, ಬೈಕ್ ಮೆಕಾನಿಕ್ ಚೇತನ್ ಮತ್ತು ಆತನ ಸ್ನೇಹಿತನಾದ ಕೆ.ಹೆಚ್ ಚೇತನ್ ಗ್ರಾಮಕ್ಕೆ ಹೋಗಿ ಹಣವನ್ನು ಕೇಳುವ ಸಮಯದಲ್ಲಿ ಗಲಾಟೆ ನಡೆದು ರಾಡ್ ಮತ್ತು ದೊಣ್ಣೆಯಿಂದ ಸತ್ಯನಾರಾಯಣ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾಗಿ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿದ್ದರು.
ರಕ್ತಸ್ರಾವದಿಂದ ನರಳಾಡುತ್ತಿದ್ದ ಸತ್ಯನಾರಾಯಣನನ್ನ ಕಂಡ ಸ್ಥಳೀಯರು ಪ್ರಥಮ ಚಿಕಿತ್ಸೆಗಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಂಗಳೂರಿನ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸತ್ಯನಾರಾಯಣ ಸಾವನಪ್ಪಿದ್ದಾರೆ.
ಅದೇ ಗ್ರಾಮದ ನಿವಾಸಿ ಬೈಕ್ ಮೆಕಾನಿಕ್ ಚೇತನ್ ಸ್ನೇಹಿತನಾದ ಜ್ವಾಲೆಂದ್ರ, ಮತ್ತು ಮೃತ ಸತ್ಯನಾರಾಯಣ ಎಂಬುವರಿಗೆ ಖಾಲಿ ನಿವೇಶನದ ವಿಚಾರವಾಗಿ ಈ ಹಿಂದೆ ಗಲಾಟೆಯು ಸಹ ನಡೆದಿತ್ತು. ಹಳೆ ದ್ವೇಷ ಮತ್ತು ಹಣದ ವಿಚಾರಕ್ಕೆ ಮನೆಯ ಬಳಿ ಬಂದು ಗಲಾಟೆ ತೆಗೆದಿದ್ದಾರೆ ಎಂದು ಸತ್ಯನಾರಾಯಣ್ ರವರ ಸಂಬಂಧಿಕರಾದ ಗಂಗಾಧರಪ್ಪ ತಿಳಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಡಿ.ವೈ.ಎಸ್ಪಿ ಶಿವಕುಮಾರ್, ಗೌರಿಬಿದನೂರು ವೃತ್ತ ನಿರೀಕ್ಷಕರಾದ ಕೆ.ಪಿ.ಸತ್ಯನಾರಾಯಣ್, ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ರಿ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.