ದಕ್ಷಿಣ ಭಾರತದಲ್ಲೇ ದನಗಳ ಜಾತ್ರೆಗೆ ಪ್ರಸಿದ್ಧಿಯಾಗಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ತುಂಬು ಜಾತ್ರೆಗೆ ದೂರದ ಊರುಗಳಿಂದ ಹೊರಿಗಳೊಂದಿಗೆ ಸಾಲು ಸಾಲಾಗಿ ರೈತರು ಬರುತ್ತಿದ್ದಾರೆ. ಕಳೆದ ಹಲವು ವರ್ಷಗಳ ಬಳಿಕ ಘಾಟಿ ದನಗಳ ಸಂತೆ ಕಳೆಗಟ್ಟಿದೆ. ಘಾಟಿ ಕ್ಷೇತ್ರದಲ್ಲಿ ರೈತರು ತಮ್ಮ ರಾಸುಗಳನ್ನು ವ್ಯಾಪಾರಕ್ಕಾಗಿ ಕಟ್ಟುವ ಸ್ಥಳದಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ಗಳನ್ನು ಸಿದ್ಧಪಡಿಸಿ, ಶೃಂಗಾರಗೊಂಡ ಹೋರಿಗಳನ್ನ ನಿಲ್ಲಿಸಿದ್ದಾರೆ.
ಮುಂಗಾರಿನಲ್ಲಿ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾದ ನಂತರ ಪ್ರಥಮ ಬಾರಿಗೆ ನಡೆಯುವ ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು,ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ,ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.
ಜಾತ್ರೆಯಲ್ಲಿ ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರುತ್ತವೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಕೃಷಿ ಕೆಲಸಗಳಿಗೆ ಹೋರಿಗಳ ಖರೀದಿಗೆ ಬರುತ್ತಾರೆ.
ರೂಪಾಂತರಿ ತಳಿ ಜೆಎನ್- 1 ಕೋವಿಡ್ ಭೀತಿಯ ನಡುವೆ ಸಜ್ಜಾದ ಜಾತ್ರೆ:
ಕೋವಿಡ್ ಕಾರಣದಿಂದ ಮೂರು ವರ್ಷಗಳಿಂದಲೂ ರಾಸುಗಳ ಜಾತ್ರೆ ಅಷ್ಟಾಗಿ ನಡೆದಿರಲಿಲ್ಲ. 2022ರ ಡಿಸೆಂಬರ್ ನಲ್ಲಿ ಚರ್ಮ ಗಂಟು ರೋಗ ರಾಸುಗಳನ್ನು ಕಾಡಿದ್ದರಿಂದ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಆದರೂ ಕೆಲ ರೈತರು ಜಾತ್ರೆಗೆ ರಾಸುಗಳೊಂದಿಗೆ ಬಂದಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಿಂದಕ್ಕೆ ಕಳುಹಿಸಲಾಗಿತ್ತು. 2022ರಿಂದ ರಥೋತ್ಸವ ಮಾತ್ರ ನಡೆದಿತ್ತು. ಈ ಬಾರಿ ಯಾವುದೇ ಆತಂಕ ಇಲ್ಲದೆ ರಾಸುಗಳ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ರಾಜ್ಯದಲ್ಲಿ ಕೋವಿಡ್ ಭೀತಿ ಎದುರಾಗಿದೆ.
ಬೆಂಗಳೂರಿಗೆ ಸಮೀಪದಲ್ಲೇ ಇರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆ ವೀಕ್ಷಣೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳೊಂದಿಗೆ ಬರುವ ನೋಡುಗರ ಸಂಖ್ಯೆಯು ಹೆಚ್ಚಾಗಿದೆ.
ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟುವ ಸ್ಥಳಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಮಾದರಿಯಲ್ಲಿ ಪೆಂಡಾಲ್ಗಳನ್ನು ನಿರ್ಮಿಸುವ ರೈತರ ಸಂಖ್ಯೆಯು ಹೆಚ್ಚಾಗಿದೆ.
ಹೋರಿಗಳು ಮಲಗಲು ವಿಶೇಷವಾಗಿ ನಿರ್ಮಿಸುವ ಮೆತ್ತನೆಯ ಹುಲ್ಲಿನ ಹಾಸಿಗೆ, ಪೆಂಡಾಲ್ ಅನ್ನು ಬಣ್ಣ ಬಣ್ಣದ ಅಲಂಕಾರಿಕ ಹೂವುಗಳಿಂದ ಸಿಂಗರಿಸಲಾಗುತ್ತಿದೆ.
ಜಾತ್ರೆಯಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ಗಳನ್ನು ನಿರ್ಮಿಸುವುದು, ಹೋರಿಗಳನ್ನು ಮೇಯಿಸಿ ಜಾತ್ರೆಗೆ ಕರೆತುರುವುದು ಇತ್ತೀಚಿನ ದಿನಗಳಲ್ಲಿ ಕೆಲ ರೈತರಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದು, ಲಕ್ಷಾಂತರ ರೂಪಾಯಿಗಳನ್ನು ಇದಕ್ಕಾಗಿಯೇ ಖರ್ಚು ಮಾಡಲಾಗುತ್ತಿದೆ.
ಈ ಹಿಂದಿನ ಜಾತ್ರೆಯಲ್ಲಿ ಒಂದು ಜೋಡಿ ಹೋರಿಗಳನ್ನು ₹1.75 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತಲು ಹೆಚ್ಚಿನ ಮೊತ್ತದ ಹೋರಿಗಳು ಬರುವ ನಿರೀಕ್ಷೆ ಮಾಡಲಾಗಿದೆ.
ಬಣ್ಣದ ಬಾರು ಕೋಲುಗಳು:
ಕೃಷಿ ಕೆಲಸ ಮಾಡುವ ಹೋರಿಗಳು ಸೇರಿದಂತೆ ರಾಸುಗಳ ಕೊರಣಿಗೆ ಕಟ್ಟುವ ಕಂಬಲಳಿ ದಾರ, ಘಂಟೆಗಳು, ಗೌಸಿಣಿಗೆ, ಬಣ್ಣ ಬಣ್ಣದ ಬಾರು ಕೋಲುಗಳು, ಘಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಈಗಾಗಲೇ ವ್ಯಾಪಾರಕ್ಕೆ ಸಿದ್ಧಗೊಂಡಿವೆ.
ಈ ಹಿಂದೆ ಹೋರಿಗಳನ್ನು ಕಟ್ಟುವ ರೈತರು ಮಾತ್ರ ಬಾರು ಕೋಲುಗಳನ್ನು ಖರೀದಿಸುತ್ತಿದ್ದರು. ಆದರೆ ಇತ್ತೀಚಿಗೆ ಜಾತ್ರೆಯಲ್ಲಿ ಬಣ್ಣ ಬಣ್ಣದ ಬಾರು ಕೋಲುಗಳನ್ನು ಖರೀದಿ ಮನೆಗೆ ಕೊಂಡೊಯ್ಯುವುದು ಶೋಕಿಯ ಸಂಗತಿಯಾಗಿದೆ. ಹಾಗಾಗಿ ಜಾತ್ರೆಗೆ ಬರುವ ಮಕ್ಕಳು,ಅದರಲ್ಲೂ ಯುವ ಸಮುದಾಯ ಬಾರು ಕೋಲುಗಳನ್ನು ಖರೀದಿಸಿ ಜಾತ್ರೆಯಲ್ಲಿ ಕೈ ಯಲ್ಲಿಡಿದುಕೊಂಡು ಒಡಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಡಿಸೆಂಬರ್ ಚಳಿ ಪ್ರಾರಂಭ:
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರೈತರು, ರಾಸುಗಳು ಚಳಿಯೊಂದಿಗೆ ಇರುವುದು ಮಾಮೂಲು. ಆದರೆ ಈ ಬಾರಿ ತೀವ್ರ ಮಳೆಯ ಕೊರತೆಯಿಂದಾಗಿ ಅಷ್ಟಾಗಿ ಚಳು ಇರುವುದಿಲ್ಲ ಎನ್ನುವ ನಿರೀಕ್ಷೆ ಇತ್ತು. ಆದರೆ ಎರಡು ದಿನಗಳಿಂದ ಮೈ ಕೊರೆಯುವ ಚಳಿ ಪ್ರಾರಂಭವಾಗಿದೆ. ಅದರಲ್ಲೂ ಭಾನುವಾರ ಬೆಳಿಗ್ಗೆ 8 ಗಂಟೆಯಾದರೂ ಸಹ ಚಳಿಯೊಂದಿಗೆ ಮಂಜು ಸಹ ಮುಸುಕಿತ್ತು.
ಜಾತ್ರೆಗೆ ಬೀರಲಿದೆಯೆ ಬರದ ಕರಿನೆರಳು:
ಸಾಮಾನ್ಯವಾಗಿ ಘಾಟಿ ಜಾತ್ರೆಯಲ್ಲಿ ರಾಸುಗಳ ಬೆಲೆ ಏರಿಕೆಯಾಗುವುದೇ ಉತ್ತರ ಕರ್ನಾಟಕ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೆಲಸಕ್ಕೆ ಹೋರಿಗಳನ್ನು ಖರೀದಿಸಲು ಬರುವುದರಿಂದ. ಆದರೆ ಈ ಬರಿ ಉತ್ತರ-ದಕ್ಷಿಣ ಎನ್ನುವ ತಾರತಮ್ಯ ಇಲ್ಲದೆ ಇಡೀ ರಾಜ್ಯವನ್ನು ಬರ ಆವರಿಸಿದೆ. ಕೃಷಿ ಚಟುವಟಿಕೆಗಳಿಗು ಹಿನ್ನಡೆಯಾಗಿದೆ. ಮೇವಿನ ಕೊರತೆಯು ರೈತರನ್ನು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ನಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆಯಲ್ಲಿ ರಾಸುಗಳ ಖರೀದಿ ಬರಾಟೆ ಹೇಗಿರಲಿದೆ ಎನ್ನುವ ನಿರೀಕ್ಷೆ ರೈತರಲ್ಲಿದೆ.
ದನಗಳ ಜಾತ್ರೆಯಲ್ಲಿ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಅಪರಾಧದ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.