ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ಅವರಿಗೆ ಕುಟುಂಬಸ್ಥರು ಭಾವುಕ ವಿದಾಯ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ನವದೆಹಲಿಯ ಏಮ್ಸ್‌ನಲ್ಲಿರುವ ಪ್ಯಾಲಿಯೇಟಿವ್ ಕೇರ್ ಘಟಕಕ್ಕೆ ಹರೀಶ್ ರಾಣಾ ಸ್ಥಳಾಂತರಗೊಳ್ಳುವ ಮುನ್ನ ಸೆರೆಯಾಗಿರುವ ವಿಡಿಯೋ ಅದು.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಹರೀಶ್ ರಾಣಾ ಕಣ್ಣು ಮಿಟುಕಿಸುವುದು ಮತ್ತು ಗಂಟಲಲ್ಲಿ ನುಂಗುವಂತೆ ಮಾಡುವುದು ಕಾಣುತ್ತದೆ. ಹರೀಶ್ ರಾಣಾ ಹಣೆಯ ಮೇಲೆ ತಿಲಕ ಹಚ್ಚಿ, ನೆತ್ತಿಯನ್ನು ಸವರುತ್ತಾ “ಎಲ್ಲರನ್ನೂ ಕ್ಷಮಿಸಿ, ಶಾಂತಿಯಿಂದ ಹೊರಡು” ಎಂದು ಬ್ರಹ್ಮ ಕುಮಾರಿ ಸಂಸ್ಥೆಯ ಸದಸ್ಯೆ ಹೇಳಿರುವುದು ವಿಡಿಯೋದಲ್ಲಿದೆ. ಇದೇ ವೇಳೆ ಹರೀಶ್ ರಾಣಾ ಪಕ್ಕದಲ್ಲೇ ತಾಯಿ ಭಾವುಕರಾಗಿ ಕುಳಿತದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ವಿವರ
ಹರೀಶ್ ರಾಣಾ, ತುಂಬು ಜೀವಂತಿಕೆಯ, ಸ್ಪುರದ್ರೂಪಿ ತರುಣ. ಆಟೋಟಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿದ್ದ ಅವರು, ಉತ್ತಮ ಫುಟ್‌ಬಾಲ್ ಆಟಗಾರನಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ರಾಣಾ, 2013ರ ಒಂದು ದಿನ ಮೊಹಾಲಿಯಲ್ಲಿನ ಪಿ.ಜಿ.ಯ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು. ಇದರ ಪರಿಣಾಮವಾಗಿ, ತಲೆಗೆ ತೀವ್ರ ಪೆಟ್ಟು ಬಿದ್ದು, ಕೋಮಾಕ್ಕೆ ಜಾರಿದರು. ನೆನಪು, ಪ್ರಜ್ಞೆ ಯಾವುದೂ ಇಲ್ಲದೆ, ನಿಶ್ವೇಷ್ಟಿತರಾಗಿ ದಶಕಕ್ಕೂ ಹೆಚ್ಚು ಕಾಲ ಹಾಸಿಗೆಯಲ್ಲಿಯೇ ಜೀವಚ್ಛವದಂತೆ ಇರುವ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಈಗ ಅನುಮತಿ ನೀಡಿದೆ. ಇದು ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಒಂದು ಮೈಲಿಗಲ್ಲಾಗಿದೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಐತಿಹಾಸಿಕ ತೀರ್ಪು ನೀಡಿತು. ಪ್ಯಾಸಿವ್ ಯೂಥನೇಷಿಯಾ ಮೂಲಕ ಗೌರವಯುತ ಮರಣ ಪಡೆಯಲು ಹರೀಶ್ ರಾಣಾಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದ್ದು, ಇದು ಭಾರತದಲ್ಲಿ ನ್ಯಾಯಾಲಯದ ಆದೇಶದ ಮೂಲಕ ಪ್ಯಾಸಿವ್ ಯೂಥನೇಷಿಯಾ ಅನುಮೋದಿಸಲಾದ ಮೊದಲ ಪ್ರಕರಣವಾಗಿದೆ.
ನ್ಯಾಯಾಲಯದ ತೀರ್ಪಿನ ಬಳಿಕ ಹರೀಶ್ ರಾಣಾ ಅವರನ್ನು AIIMS ಆಸ್ಪತ್ರೆಯ ಪ್ಯಾಲಿಯೇಟಿವ್ ಕೇರ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಮಂಡಳಿ ಈಗ ಅಂತಿಮ ಆರೈಕೆ ಯೋಜನೆಯನ್ನು ರೂಪಿಸಲಿದೆ.
ಏನಿದು ಪ್ಯಾಸಿವ್ ಯೂಥನೇಷಿಯಾ?
ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯ ಇಚ್ಛೆಯ ಮೇರೆಗೆ ಅಥವಾ ಕುಟುಂಬಸ್ಥರ ಕೋರಿಕೆ ಮೇರೆಗೆ ಗೌರವಯುತ ಮರಣಕ್ಕೆ ಅವಕಾಶ ನೀಡುವ ವೈದ್ಯಕೀಯ ಕ್ರಮವೇ ಯೂಥನೇಷಿಯಾ. ಪ್ಯಾಸಿವ್ ಯೂಥನೇಷಿಯಾ ಅನುಸಾರ ರೋಗಿಯ ಜೀವವನ್ನು ಉಳಿಸಬಹುದಾದ ಚಿಕಿತ್ಸೆಯನ್ನು ಸ್ಥಗಿತಗೊಳಿಸುವುದು.
ಘನತೆಯಿಂದ ಸಾಯುವುದು ಕೂಡ ಸಂವಿಧಾನದ ಮೂಲಭೂತ ಹಕ್ಕು ಎಂದು 2018ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಪರೋಕ್ಷ ದಯಾಮರಣಕ್ಕೆ ಮಾರ್ಗಸೂಚಿಗಳನ್ನೂ ರೂಪಿಸಿತ್ತು. ಅವುಗಳನ್ನು 2023ರಲ್ಲಿ ಮಾರ್ಪಡಿಸಲಾಗಿತ್ತು. ಈ ಮಾರ್ಗಸೂಚಿ ರೂಪಿಸಿದ ನಂತರ ಅದರ ಅನ್ವಯ ದೇಶದಲ್ಲಿ ದಯಾಮರಣಕ್ಕೆ ಅವಕಾಶ ನೀಡಿದ ಮೊದಲ ಪ್ರಕರಣ ಹರೀಶ್ ರಾಣಾ ಅವರದ್ದಾಗಿದೆ.
ದಯಾಮರಣಕ್ಕೆ ನ್ಯಾಯಾಲಯದ ಅನುಮತಿ ಪಡೆಯಲು ರಾಣಾ ಪೋಷಕರು ಹಲವು ವರ್ಷ ಹೋರಾಡಿದರು. ಗಾಜಿಯಾಬಾದ್‌ನ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರವನ್ನು ಕೊಳವೆಯ ಮೂಲಕ ನೀಡುತ್ತಾ ಮಗನ ಜೀವ ಕಾಪಾಡುತ್ತಲೇ ಬಂದವರು ಅವರು. ಆದರೆ, ರಸ್ತೆ ಬದಿ ಸ್ಯಾಂಡ್‌ವಿಚ್ ಮಾರಿ ಜೀವನ ನಡೆಸುವ ರಾಣಾ ತಂದೆಗೆ ಮಗನ ಆರೈಕೆಯೇ ಒಂದು ಸವಾಲಾಗಿತ್ತು. ಜತೆಗೆ ದಂಪತಿಗೆ ವಯಸ್ಸಾಗಿದ್ದರಿಂದ ತಮ್ಮ ನಂತರ ಮಗನನ್ನು ನೋಡಿಕೊಳ್ಳುವವರು ಯಾರು ಎನ್ನುವ ಚಿಂತೆಯೂ ಕಾಡತೊಡಗಿತು. ಈ ದಿಸೆಯಲ್ಲಿ, ತಮ್ಮ ಮಗನಿಗೆ ಘನತೆಯಿಂದ ಸಾಯುವ ಹಕ್ಕನ್ನು ಖಾತ್ರಿಪಡಿಸಿ, ದಯಾಮರಣ ಕಲ್ಪಿಸಬೇಕು ಎಂದು ರಾಣಾ ಪೋಷಕರು 2024ರ ಜುಲೈನಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಆಗ ರಾಣಾಗೆ ವೆಂಟಿಲೇಟರ್ ಅಳವಡಿಸಿರಲಿಲ್ಲ. ಕೃತಕ ಸಾಧನಗಳ ಬೆಂಬಲ ಇಲ್ಲದೇ ಸಹಜವಾಗಿಯೇ ಬದುಕುಳಿದಿರುವ ರಾಣಾ ಪ್ರಕರಣವು ದಯಾಮರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅರ್ಜಿ ವಜಾ ಮಾಡಿತ್ತು. ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದ ಸುಪ್ರೀಂಕೋರ್ಟ್, ದಂಪತಿಗೆ ಅಗತ್ಯ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತು. ಆದರೆ, ರಾಣಾ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದರಿಂದ ಪೋಷಕರು 2025ರ ನವೆಂಬರ್‌ನಲ್ಲಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ರಾಣಾ ಆರೋಗ್ಯದ ಬಗ್ಗೆ ವರದಿ ನೀಡಲು ನ್ಯಾಯಾಲಯವು ಪ್ರಾಥಮಿಕ ವೈದ್ಯಕೀಯ ಮಂಡಳಿ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳನ್ನು ರಚಿಸಿತ್ತು. ಅವು ನೀಡಿದ ವರದಿಗಳನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿತು. ರಾಣಾ ಆರೋಗ್ಯ ಸುಧಾರಿಸುವ ಯಾವ ಸಾಧ್ಯತೆಯೂ ಇಲ್ಲ ಎನ್ನುವುದನ್ನು ಅರಿತ ನ್ಯಾಯಾಲಯವು, ಅವರು ಪರೋಕ್ಷ ದಯಾಮರಣಕ್ಕೆ ಅರ್ಹ ಎಂದು ತೀರ್ಪು ನೀಡಿತು. ದಯಾಮರಣದ ಬಗ್ಗೆ ಪ್ರತ್ಯೇಕವಾದ ಸಮಗ್ರ ಕಾಯ್ದೆಯೊಂದನ್ನು ರೂಪಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಹರೀಶ್ ರಾಣಾ ಪ್ರಕರಣವು ದಯಾಮರಣದ ವಿಚಾರದಲ್ಲಿ ಒಂದು ಪ್ರಮುಖ ತಿರುವಾಗಲಿದೆ ಎನ್ನುವ ವಿಶ್ಲೇಷಣೆ ಇದೆ. ಪ್ರಕರಣಗಳಿಗೆ ಅಗತ್ಯವಾದ ವೈದ್ಯಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆಯೂ ಪ್ರಕರಣದ ವಿಚಾರಣೆಯ ವೇಳೆ ಚರ್ಚೆಯಾಗಿದೆ. ಈ ದಿಸೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಅಲ್ಪಸ್ವಲ್ಪ ಕೆಲಸ ಆಗಿದ್ದು, ಉಳಿದ ರಾಜ್ಯಗಳಲ್ಲಿ ಸೂಕ್ತ ವ್ಯವಸ್ಥೆ ರೂಪಿಸಿಲ್ಲ.
ವಾಸಿಯಾಗದ ಕಾಯಿಲೆಯಿಂದ ನರಳುತ್ತಿರುವವರಿಗೆ ಮತ್ತು ಅವರ ಕುಟುಂಬದವರಿಗೆ ದಯಾಮರಣ ಬಿಡುಗಡೆ ನೀಡುತ್ತದೆ ಎನ್ನುವುದು ಕೆಲವರ ವಾದ. ಹೃದಯ ಬಡಿತ ಇದ್ದ ಮಾತ್ರಕ್ಕೆ ವ್ಯಕ್ತಿ ಜೀವಂತ ಇದ್ದ ಹಾಗೆ ಅಲ್ಲ. ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು, ಅನೇಕರ ಜೀವ-ಜೀವನ ಅದರಿಂದ ದುರ್ಭರವಾಗುತ್ತಿದೆ. ದಯಾಮರಣಕ್ಕೆ ಅವಕಾಶ ಇರಬಾರದು ಎಂದರೆ, ಗಂಭೀರ ಕಾಯಿಲೆಗಳಿಂದ ಬದುಕುವ ಸಾಧ್ಯತೆ ಇಲ್ಲದವರಿಗೆ ಉತ್ತಮವಾದ ಚಿಕಿತ್ಸೆಯ ಲಭ್ಯತೆ, ಕೊನೆಯ ದಿನಗಳ ಆರೈಕೆಯ ವ್ಯವಸ್ಥೆಯನ್ನು ಖಾತರಿಪಡಿಸಬೇಕು ಎನ್ನುವ ಒತ್ತಾಯ ಇದೆ.
ನೇರ ದಯಾಮರಣ, ಪರೋಕ್ಷ ದಯಾಮರಣ
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನೇರ ದಯಾಮರಣ (ವಿಷದ ಚುಚ್ಚುಮದ್ದು ಚುಚ್ಚುವುದು) ಮತ್ತು ಪರೋಕ್ಷ ದಯಾಮರಣ (ಜೀವ ಹಿಡಿದಿಡುವ ಸಾಧನ/ಚಿಕಿತ್ಸೆ ನಿಲ್ಲಿಸುವುದು) ವಿಧಾನಗಳು ಚಾಲ್ತಿಯಲ್ಲಿವೆ. ಆದರೆ, ಭಾರತದಲ್ಲಿ ಉದ್ದೇಶಪೂರ್ವಕವಾಗಿ ಪ್ರಾಣ ತೆಗೆಯುವುದು ಅಪರಾಧ ಎನ್ನಿಸಿಕೊಳ್ಳುವುದರಿಂದ ನೇರ ದಯಾಮರಣಕ್ಕೆ ಅವಕಾಶವಿಲ್ಲ. ಆದಾಗ್ಯೂ, ಜೀವರಕ್ಷಕ ಸಾಧನ ತೆಗೆಯುವುದು, ಚಿಕಿತ್ಸೆ ನಿಲ್ಲಿಸುವುದು ಕೂಡ ಒಂದು ಬಗೆಯ ನೇರ ದಯಾಮರಣವೇ ಎನ್ನುವ ವಾದ ಇದೆ. ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು, ದೇಶದಲ್ಲಿ ದಯಾಮರಣಕ್ಕೆ ಅವಕಾಶ ನೀಡಿದರೆ, ದುರುಪಯೋಗ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುವುದು ಹಲವರ ವಾದ.
ವ್ಯಕ್ತಿಯು ಆರೋಗ್ಯವಾಗಿರುವಾಗಲೇ ಭವಿಷ್ಯದಲ್ಲಿ ತನಗೆ ಎಂಥ ಚಿಕಿತ್ಸೆ ಸಿಗಬೇಕು ಅಥವಾ ಚಿಕಿತ್ಸೆ ಬೇಡ ಎಂಬುದನ್ನು ಮರಣ ಇಚ್ಛೆಯ ಉಯಿಲಿನ ಮೂಲಕ ದಾಖಲಿಸಬಹುದು ಮತ್ತು ಕಠಿಣ ಮಾರ್ಗಸೂಚಿಗಳ ಅಡಿಯಲ್ಲಿ ಔಷಧೋಪಚಾರ ನಿಲ್ಲಿಸುವ ಮೂಲಕ ಪರೋಕ್ಷ ದಯಾಮರಣವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಹೇಳಿದೆ. ಆದರೆ, ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಇಲ್ಲ ಮತ್ತು ಅನೇಕ ರಾಜ್ಯಗಳಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆಯೂ ಇಲ್ಲ. ಕರ್ನಾಟಕ ಸರ್ಕಾರವು ಮರಣ ಇಚ್ಛೆಯ ಉಯಿಲನ್ನು ದಾಖಲಿಸುವ ಅವಕಾಶ ಕಲ್ಪಿಸಿದೆ.
ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿರುವವರು, ಸಾಯುವ ಸ್ಥಿತಿ ಅಥವಾ ಕೋಮಾದಲ್ಲಿರುವವರು, ಬದುಕುವ ಸಾಧ್ಯತೆಯೇ ಇಲ್ಲದವರು ಮತ್ತು ಜೀವಚ್ಛವದಂತೆ ಬದುಕುತ್ತಿರುವವರಿಗೆ ದಯಾಮರಣಕ್ಕೆ ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಅದು ನ್ಯಾಯಾಲಯದ ಆದೇಶದ ಮೂಲಕ ಮಾತ್ರವೇ ಜಾರಿಯಾಗಬೇಕು. ಅದಕ್ಕೆ ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ನ್ಯಾಯಾಲಯವು ನಿರ್ದಿಷ್ಟ ಪ್ರಕರಣದಲ್ಲಿ ದಯಾಮರಣಕ್ಕೆ ಅನುಮತಿ ನೀಡುವ ಸಂಬಂಧ ವೈದ್ಯಕೀಯ ತಜ್ಞರಿರುವ ಪ್ರಾಥಮಿಕ ವೈದ್ಯಕೀಯ ಮಂಡಳಿ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳನ್ನು ನೇಮಿಸುತ್ತದೆ. ಅವು ನೀಡಿದ ವರದಿಯ ಆಧಾರದಲ್ಲಿ ನ್ಯಾಯಾಲಯವು ತೀರ್ಮಾನ ಕೈಗೊಳ್ಳುತ್ತದೆ.
ದೇಶದಲ್ಲಿ ದಯಾಮರಣಕ್ಕೆ ಸಂಬಂಧಿಸಿದ ಮೊದಲ ಪ್ರಮುಖ ನಿರ್ಧಾರ ಬಂದಿದ್ದು 1987ಲ್ಲಿ. ಮಾರುತಿ ಶ್ರೀಪತಿ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 309 ಅನ್ನು ವಿಶ್ಲೇಷಿಸಿತು. ಈ ಸೆಕ್ಷನ್ ಪ್ರಕಾರ, ಆತ್ಮಹತ್ಯೆಗೆ ಯತ್ನಿಸುವುದು ಅಪರಾಧ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಾಯುವ ಹಕ್ಕು ಕೂಡ ಬದುಕುವ ಹಕ್ಕಿನ ಭಾಗ. ಹಾಗಾಗಿ ಐಪಿಸಿ ಸೆಕ್ಷನ್ 309 ಅಸಾಂವಿಧಾನಿಕ ಎಂದು ಹೇಳಿತ್ತು. ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ತಡೆಯಲು ಸಾಧ್ಯವಾಗದಷ್ಟು ನೋವನ್ನು ಉಂಡವರಿಗೆ ತಮ್ಮ ಬದುಕನ್ನು ಕೊನೆಗೊಳಿಸಲು ಅವಕಾಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.
ಈ ಅಭಿಪ್ರಾಯಕ್ಕೆ ವಿರುದ್ಧವಾದ ನಿಲುವನ್ನು ಸುಪ್ರೀಂ ಕೋರ್ಟ್ 1996ರಲ್ಲಿ ವ್ಯಕ್ತಪಡಿಸಿತ್ತು. ಜ್ಞಾನ್ ಕೌರ್ ಮತ್ತು ಪಂಜಾಬ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಅರ್ಜಿದಾರರು, ಬೇರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನೆರವು ನೀಡಿದ್ದ ಪ್ರಕರಣದಲ್ಲಿ ತಮಗೆ ಐಪಿಸಿಯ 306 ಸೆಕ್ಷನ್ ಅಡಿಯಲ್ಲಿ ಶಿಕ್ಷೆಯಾಗಿದ್ದನ್ನು ಪ್ರಶ್ನಿಸಿದ್ದರು. ಸಾಯುವ ಹಕ್ಕು ಮೂಲಭೂತ ಹಕ್ಕು ಆಗಿರುವುದರಿಂದ, ಆ ಹಕ್ಕನ್ನು ಚಲಾಯಿಸಲು ಬೇರೆಯವರಿಗೆ ಸಹಾಯ ಮಾಡುವುದು ಅಪರಾಧ ಕೃತ್ಯ ಆಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ, ಈ ವಾದವನ್ನು ಒಪ್ಪದಿದ್ದ ಸುಪ್ರೀಂ ಕೋರ್ಟ್, ಬದುಕುವ ಹಕ್ಕು, ಸಾಯುವ ಹಕ್ಕನ್ನು ನೀಡುವುದಿಲ್ಲ ಎಂದು ಪ್ರತಿಪಾದಿಸಿತ್ತು. ಮಾರುತಿ ಶ್ರೀಪತಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡರೂ, ಐಪಿಸಿ ಸೆಕ್ಷನ್ 309 ಸಂವಿಧಾನಬದ್ಧ ಎಂದು ಹೇಳಿತ್ತು.
ದಯಾಮರಣದ ಬಗ್ಗೆ ಮಹತ್ವದ ಕಾನೂನು ಚರ್ಚೆ ನಡೆದಿದ್ದು ಅರುಣಾ ಶಾನ್‌ಭಾಗ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ. ಆಸ್ಪತ್ರೆಯ ನೌಕರನಿಂದಲೇ ಅತ್ಯಾಚಾರ ಮತ್ತು ಗಂಭೀರ ದಾಳಿಗೆ ಒಳಗಾಗಿ 37 ವರ್ಷ ಜೀವಂತ ಶವವಾಗಿ ಮಲಗಿದ್ದ ನರ್ಸ್ ಅರುಣಾ ಶಾನ್‌ಭಾಗ್ ಅವರಿಗೆ ದಯಾಮರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದನ್ನು ತಳ್ಳಿಹಾಕಿತ್ತು. ಆದರೆ, ಕಠಿಣ ನಿಯಮಗಳ ಅಡಿಯಲ್ಲಿ ಪರೋಕ್ಷ ದಯಾಮರಣಕ್ಕೆ ಅವಕಾಶ ಕಲ್ಪಿಸಬಹುದು ಎಂದು ಹೇಳಿತ್ತು. ಅಪರೂಪದ ಪ್ರಕರಣಗಳಲ್ಲಿ ಪರೋಕ್ಷ ದಯಾಮರಣ ನೀಡಬಹುದು. ಆದರೆ, ಯಾವಾಗ ಅವಕಾಶ ಕೊಡಬೇಕು ಎಂಬುದರ ಬಗ್ಗೆ ಹೈಕೋರ್ಟ್‌ನಿಂದ ಅನುಮತಿ ಪಡೆಯಬೇಕು ಎಂದು ಅದು ಹೇಳಿತ್ತು.
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ 2018ರಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿತ್ತು. ಎನ್‌ಜಿಒ ಕಾಮನ್ ಕಾಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ, ಪರೋಕ್ಷ ದಯಾಮರಣಕ್ಕೆ ಅನುಮತಿ ನೀಡಿತು ಮತ್ತು ಮರಣ ಇಚ್ಛೆ ಉಯಿಲುಗಳನ್ನು ಪರಿಗಣಿಸಬಹುದು ಎಂದು ಹೇಳಿತ್ತು. ದಯಾಮರಣ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಸ್ಪಷ್ಟವಾದ ನಿಯಮಗಳನ್ನೂ ಅದು ರೂಪಿಸಿತ್ತು. ಪ್ರಕ್ರಿಯೆ ಮೇಲೆ ನ್ಯಾಯಾಧೀಶರ ಮೇಲ್ವಿಚಾರಣೆ, ವೈದ್ಯಕೀಯ ಮಂಡಳಿಯ ಶಿಫಾರಸುಗಳು ಮತ್ತು ಇನ್ನಿತರ ನಿಯಮಗಳನ್ನೊಳಗೊಂಡ ಮಾರ್ಗಸೂಚಿಯನ್ನು ನ್ಯಾಯಾಲಯ ಪ್ರಕಟಿಸಿತು. ಈ ತೀರ್ಮಾನವು ದಯಾಮರಣಕ್ಕೆ ಸಂಬಂಧಿಸಿದ ಭಾರತದ ಧೋರಣೆಯನ್ನು ಬದಲಿಸಿತು.
2023ರಲ್ಲಿ ಸುಪ್ರೀಂ ಕೋರ್ಟ್ 2018ರ ಮಾರ್ಗಸೂಚಿಗಳಿಗೆ ತಿದ್ದುಪಡಿ ತಂದು ನಿಯಮಗಳನ್ನು ಮತ್ತಷ್ಟು ಸರಳಗೊಳಿಸಿತು.
ಅಮೆರಿಕ, ಕೆನಡಾ, ನೆದರ್‌ಲೆಂಡ್ಸ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಸಂಬಂಧಿಸಿದ ಕಾನೂನುಗಳು ಕಠಿಣವಾಗಿಲ್ಲ.
ಆದರೆ, ಭಾರತದ ಕಾನೂನು ಕಠಿಣವಾಗಿದೆ. 2018ರಿಂದ ದೇಶದಲ್ಲಿ ಪರೋಕ್ಷ ದಯಾಮರಣಕ್ಕೆ ಕಾನೂನಿನ ಅಡಿಯಲ್ಲಿ ಹಲವು ಷರತ್ತುಗಳೊಂದಿಗೆ ಅವಕಾಶ ಇದೆ. 2011ರಲ್ಲಿ ಅರುಣಾ ಶಾನ್‌ಭಾಗ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅರುಣಾ ಅವರಿಗೆ ದಯಾಮರಣಕ್ಕೆ ಅವಕಾಶ ನೀಡಿರಲಿಲ್ಲ.
2018ರಲ್ಲಿ ಕಾಮನ್ ಕಾಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಘನತೆಯಿಂದ ಸಾಯುವ ಹಕ್ಕನ್ನೂ ಸಂವಿಧಾನದ 21ನೇ ವಿಧಿ ದೇಶದ ನಾಗರಿಕರಿಗೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿತು. ಆದರೆ, ನಿರ್ದಿಷ್ಟ ವ್ಯಕ್ತಿಗೆ ದಯಾಮರಣ ಕರುಣಿಸುವುದಕ್ಕೂ ಮೊದಲು ನ್ಯಾಯಾಲಯದ ಒಪ್ಪಿಗೆ ಬೇಕು ಎಂದೂ ಹೇಳಿತು.
ಜಿಲ್ಲೆಯಾದ್ಯಂತ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ…
ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ…
ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಡಾ.ಕೆ.ಸುಧಾಕರ್ ಭೇಟಿ ಮಾಡಿ, 'ಪ್ರಸಾದ್ 2.0'…
ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ವಿಕಾರವಾಗಿ ರೀಲ್ಸ್ ಮಾಡುತ್ತಿದ್ದ ರೀಲ್ಸ್ ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜ ಬೈಕ್ ನಲ್ಲಿ ತ್ರಿಬಲ್ ರೈಡ್…
ಕೋಲಾರ: ಅಮೆಜಾನ್ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…
ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ (ಮೀಸಲು ಪೊಲೀಸ್ ಪಡೆ) ಸಬ್ ಇನ್‌ಸ್ಪೆಕ್ಟರ್‌ಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಚಾಮರಾಜನಗರ ಮತ್ತು…