ಹರೀಶ್ ಗೌಡರು ರಾಜಕೀಯ ಚಪಲಕ್ಕಾಗಿ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ: ರಾಜಕೀಯ ಚಪಲ ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ: ಹರೀಶ್ ಗೌಡರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಸವಾಲು

ದೊಡ್ಡಬಳ್ಳಾಪುರ: ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸುವುದು ಹಾಗೂ ರಾಜಕೀಯ ಚಪಲಕ್ಕಾಗಿ ಮನಬಂದಂತೆ ಮಾತನಾಡುವುದನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡರು ನಿಲ್ಲಿಸಬೇಕು ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಗೌಡರು ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಮೊದಲು ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು. 2013ರಿಂದ 2023ರವರೆಗೆ ತಾಲೂಕಿನ ಜನತೆ ವೆಂಕಟರಮಣಯ್ಯ ಅವರಿಗೆ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದು, ಅವರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಸ್ ನಿಲ್ದಾಣ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸರ್ಕಾರಿ ಕಾಲೇಜಿನ ಅಭಿವೃದ್ಧಿ ಹಾಗೂ ಹೋಬಳಿಗೊಂದು ವಸತಿ ಶಾಲೆಗಳ ಸ್ಥಾಪನೆ ಅವರ ಅವಧಿಯ ಪ್ರಮುಖ ಅಭಿವೃದ್ಧಿ ಕಾರ್ಯಗಳಾಗಿವೆ. ಇವುಗಳನ್ನು ಜನರು ಗಮನಿಸಬೇಕು ಎಂದು ತಿಳಿಸಿದರು.

ಬಹಿರಂಗ ಚರ್ಚೆಗೆ ಆಹ್ವಾನ:

ವೆಂಕಟರಮಣಯ್ಯ ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂಬುದಕ್ಕೆ ದಾಖಲೆಗಳಿದ್ದರೆ ಹರೀಶ್ ಗೌಡರು ಬಹಿರಂಗವಾಗಿ ತರಲಿ. ಅಭಿವೃದ್ಧಿ ಕಾರ್ಯಗಳ ಕುರಿತು ದಾಖಲೆ ಸಮೇತ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಹಿಂದಿನ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಿ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ. ಜನಸಾಮಾನ್ಯರು ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವತ್ತ ಗಮನಹರಿಸಲಿ ಎಂದು ಸವಾಲು ಹಾಕಿದರು.

ಬಾಶೆಟ್ಟಿಹಳ್ಳಿ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿತ್ತು ಎಂದು ಹೇಳುವವರು ಇತ್ತೀಚೆಗೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದಿಂದ ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು, ಅವರಲ್ಲಿ ಎಷ್ಟು ಮಂದಿ ಗೆಲುವು ಸಾಧಿಸಿದ್ದರು ಎಂಬುದನ್ನು ತಿಳಿಸಲಿ. ತಮ್ಮ ಕಾರ್ಯಕರ್ತರನ್ನು ಬೇರೆ ಪಕ್ಷಗಳ ಮನೆಗಳಲ್ಲಿ ಜೀತಕ್ಕೆ ಬಿಟ್ಟಿರುವವರು ಮೊದಲು ತಮ್ಮ ಪಕ್ಷದ ಸಂಘಟನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ ಎಂದು ತಿರುಗೇಟು ನೀಡಿದರು.

ಹರೀಶ್ ಗೌಡರ ಹೇಳಿಕೆಗಳು ಹೈಕಮಾಂಡ್ ಮೆಚ್ಚಿಸುವ ಉದ್ದೇಶದಿಂದ ಕೂಡಿವೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಅದನ್ನು ಖಂಡಿಸಲು ಜೆಡಿಎಸ್ ನಾಯಕರಿಗೆ ಧೈರ್ಯವಿತ್ತೇ? ನರೇಂದ್ರ ಮೋದಿ ವಿರುದ್ಧ ಮಾತನಾಡುವ ತಾಕತ್ತು ಅವರಿಗಿದೆಯೇ ಎಂದು ಪ್ರಶ್ನಿಸಿದರು.

ಬುದ್ಧಿಭ್ರಮಣೆಯಾಗಿದೆ ಎಂಬ ರೀತಿಯಲ್ಲಿ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು, ಮೈತ್ರಿಕೂಟದಿಂದ ಹೊರಬಂದು ಜೆಡಿಎಸ್ ಪಕ್ಷದಿಂದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನೂ ಘೋಷಿಸಲಿ ಅಥವಾ ಹರೀಶ್ ಗೌಡರೇ ಬಿ-ಫಾರಂ ತಂದು ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

ಅನುದಾನ ತರಲು ಶಾಸಕರು ವಿಫಲ:

ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಿಲ್ಲ. ಆದರೆ ಅಗತ್ಯ ಅನುದಾನ ತರುವಲ್ಲಿ ಹಾಲಿ ಶಾಸಕರು ವಿಫಲರಾಗುತ್ತಿದ್ದಾರೆ ಎಂದು ಪುನೀತ್ ಟೀಕಿಸಿದರು.

ನೆಲಮಂಗಲ–ದೊಡ್ಡಬಳ್ಳಾಪುರ ಹೆದ್ದಾರಿಯ ದುಸ್ಥಿತಿ ಎಲ್ಲರಿಗೂ ತಿಳಿದಿದೆ. ರಸ್ತೆಯ ಗುಂಡಿಗಳಿಗೆ ಕಲ್ಲು ತುಂಬಲಾಗಿದೆಯೇ ಹೊರತು ಸಮರ್ಪಕವಾಗಿ ದುರಸ್ತಿ ಮಾಡುವ ಕೆಲಸ ನಡೆದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರ ಅನುದಾನ ನೀಡಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ಹಾಗಾದರೆ ಅಧಿಕಾರದಲ್ಲಿರುವ ಶಾಸಕರ ಜವಾಬ್ದಾರಿ ಏನು? ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ತರುವ ಕೆಲಸ ಮಾಡಬೇಕು ಎಂದರು.

ಹಾಲಿನ ದರ ಏರಿಕೆ ವಿಚಾರದಲ್ಲಿ ಜೆಡಿಎಸ್ ದ್ವಂದ್ವ ನಿಲುವು:

ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಅವರ ನೇತೃತ್ವದಲ್ಲಿ ಹಾಲಿನ ದರವನ್ನು 10 ರೂ. ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕರು ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಇದೀಗ ರಾಜ್ಯಾದ್ಯಂತ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 8 ರೂ. ಹೆಚ್ಚಳ ಘೋಷಿಸಿದ್ದಾರೆ. ಆದರೆ ಈಗ ಅದೇ ಹಾಲಿನ ದರ ಏರಿಕೆ ವಿರುದ್ಧ ಜೆಡಿಎಸ್ ನಾಯಕರು ಹೋರಾಟ ನಡೆಸುತ್ತಿರುವುದೇಕೆ? ರೈತರ ಪರವಾಗಿದ್ದಾರೆಯೇ ಅಥವಾ ರೈತರಿಗೆ ವಿರೋಧವಾಗಿ ಮಾತನಾಡುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಜೆಡಿಎಸ್ ಪಕ್ಷ ರೈತಪರ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪಕ್ಷ ಜಾರಿಗೆ ತಂದಿರುವ ಯೋಜನೆಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು. ರೈತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವುದು ಸುಲಭ. ಆದರೆ ರೈತರ ಏಳಿಗೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ ಎಂದು ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ವೆಂಕಟರಮಣಯ್ಯ ಅವರ ವಿರುದ್ಧ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ಒಡೆಯುವ ಮೂಲಕ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಎನ್‌ಎಸ್‌ಯುಐ ಅಧ್ಯಕ್ಷ ಅಶ್ವತ್ ರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವರಾಜ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಿದುಗೌಡ, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹರ್ಷಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನವೀಕರಣಗೊಂಡ ಹತ್ತು ಅಂಗನವಾಡಿ ಕೇಂದ್ರ ಹಾಗೂ ಒಂದು ಶಾಲೆಯನ್ನು ಕೇಳಚಂದ್ರ ಪ್ರತಿಷ್ಠಾನದ…

9 hours ago

ಭಗತ್ ಸಿಂಗ್ ಕ್ರೀಡಾಂಗಣ ರಸ್ತೆಯಲ್ಲಿ ಗುಂಡಿಗಳು: ವಾಹನ ಸವಾರರ ಪರದಾಟ: ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ; ಸಾರ್ವಜನಿಕರ ಆಕ್ರೋಶ

ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ…

15 hours ago

ಪ್ರಜಾ ಸೇವಾ ಆಂದೋಲನ: ಉರಿ ಬಿಸಿಲಿನಲ್ಲಿ ಜನರು, ತಣ್ಣನೆಯ ನೆರಳಡಿ ಜನಪ್ರತಿನಿಧಿಗಳು, ಅಧಿಕಾರಿಗಳು: ಅರ್ಜಿ ಸಲ್ಲಿಸಲು ಬಿಸಿಲಿನಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತ ಜನರು

ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜ್ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾ ಸೇವಾ…

15 hours ago

ಹನಿ ಟ್ರ್ಯಾಪ್……….

ಇತ್ತೀಚಿನ ಭಯೋತ್ಪಾದಕ ಸುದ್ದಿಗಳು....... ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ…

23 hours ago

ಕೇಳಚಂದ್ರ ಪ್ರತಿಷ್ಠಾನದಿಂದ ಯುವಜನತೆಗೆ ಎಐ ಕೌಶಲ್ಯ ತರಬೇತಿ:*ಕೌಶಲ್ಯ ಹೊಂದಿದ ಯುವಜನತೆಗೆ ಪ್ರಮಾಣಪತ್ರ ವಿತರಿಸಿದ ಸುಜಾ ಜಾರ್ಜ್

ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಕೌಶಲ್ಯವೇ ಯಶಸ್ಸಿನ ಫಾರ್ಮುಲಾ ಆಗಿದ್ದು, ಕೆಳಚಂದ್ರ ಪ್ರತಿಷ್ಠಾನ ಎಐ ಕೌಶಲ್ಯ ಕೋರ್ಸ್‌ ಆರಂಭಿಸುವ ಮೂಲಕ…

1 day ago

ಗೂಳ್ಯ ಗ್ರಾಮಸ್ಥರ ಬಹುದಿನಗಳ ಕನಸು ನನಸು: ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ: ಸಚಿವ ಕೆ.ಎಚ್.ಮುನಿಯಪ್ಪನವರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ

ದೊಡ್ಡಬಳ್ಳಾಪುರ: ತಾಲೂಕಿನ ಗೂಳ್ಯ ಗ್ರಾಮದ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಗೂಳ್ಯ ಮುಖ್ಯ ರಸ್ತೆಯಿಂದ…

2 days ago