ಹರಿದಾಸ ಸಾಹಿತ್ಯದ ಭಕ್ತಿ ಆಧಾರಿತ‌ ಮತ್ತು ಜನಸಾಮಾನ್ಯರ ಭಾಷೆಯಲ್ಲಿ ರಚನೆಯಾದ ಸಾಹಿತ್ಯ-ಕೆ.ವಿ.ವೆಂಕಟೇಶರೆಡ್ಡಿ

ಹರಿದಾಸ ಸಾಹಿತ್ಯದ ಭಕ್ತಿ ಆಧಾರಿತ‌ ಮತ್ತು ಜನಸಾಮಾನ್ಯರ ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಆಗಿದೆ. ಕರ್ನಾಟಕ ಸಂಗೀತಕ್ಕೆ ಹರಿದಾಸ ಸಾಹಿತ್ಯದ ಕೊಡುಗೆ ಅನನ್ಯವಾಗಿದೆ ಎಂದು‌ ನಿವೃತ್ತ ಮುಖ್ಯಶಿಕ್ಷಕ‌ ಕೆ.ವಿ.ವೆಂಕಟೇಶರೆಡ್ಡಿ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಪಂಚಾಯತಿ ಸಮೀಪವಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಕನ್ನಡ ಹರಿದಾಸ ಸಾಹಿತ್ಯ ಎಂಬ ವಿಷಯ ಕುರಿತು ಮಾತನಾಡಿದರು. ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹರಿದಾಸ ಸಾಹಿತ್ಯ ಪ್ರಭಾವ ಅಪಾರವಾಗಿದೆ. ಸಂಗೀತವನ್ನು ಭಗವಂತನನ್ನು ತಲುಪುವ ಮಾರ್ಗವೆಂದು ಪರಿಗಣಿಸಿದವರು ಹರಿದಾಸರು. ಭಕ್ತಿಪಂಥ ಉತ್ತರ ಭಾರತದಲ್ಲಿ ಪ್ರಾರಂಭವಾದರೂ, ಅದು ಹೆಚ್ಚು ಜನಪ್ರಿಯವಾಗಿದ್ದು ದಕ್ಷಿಣ ಭಾರತದಲ್ಲಿ. ಪುರಂದರದಾಸರನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹವಾಗಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಚಿಂತನೆಯನ್ನು ಹರಿದಾಸರು ಹೊಂದಿದ್ದರು ಎಂದರು.

ಆರೋಗ್ಯ ವಿಜ್ಞಾನ ಎಂಬ ವಿಷಯ ಕುರಿತು ಮಾತನಾಡಿದ ವೈದ್ಯರು ಮತ್ತು ಕಲಾವಿದರಾದ ಡಾ.ವಿ.ಸುಚಿತ್ರ, ಆರೋಗ್ಯವಂತ ಪ್ರಜೆಗಳು ದೇಶದ ಸಂಪತ್ತು. ಆರೋಗ್ಯವಂತ ವ್ಯಕ್ತಿಗಳು ತಮ್ಮ ಗುರಿಗಳನ್ನು ಸಾಧಿಸಲು ಮತ್ತು ಜೀವನವನ್ನು ಪರಿಪೂರ್ಣವಾಗಿ ಆನಂದಿಸಲು ಸಮರ್ಥರಾಗಿರುತ್ತಾರೆ. ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಇವುಗಳಿಂದ ಆರೋಗ್ಯವಂತರಾಗಲು ಸಾಧ್ಯ. ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ. ಆಧುನಿಕ ಜೀವನಶೈಲಿಯು ಮಾನಸಿಕ‌ ಒತ್ತಡ‌ ಮತ್ತು ದೈಹಿಕ ನಿಷ್ಕ್ರಿಯತೆ ಉಂಟು ಮಾಡುತ್ತಿದೆ. ಅನಾರೋಗ್ಯಕರ ಆಹಾರ ಪದ್ದತಿಯು ಅನೇಕ ರೋಗಿಗಳಿಗೆ ಕಾರಣವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಆರೋಗ್ಯ ಸಂಪಾದನೆಯೂ ಕೂಡ ಅಮೂಲ್ಯವಾದ ಸಂಪತ್ತು ಆಗಿದೆ ಎಂದರು.

‌ಕಾರ್ಯಕ್ರಮದಲ್ಲಿ‌ ಕನ್ನಡ ಸಾಹಿತ್ಯ ಪರಿಷತ್ತು ‌ಮತ್ತು ಕನ್ನಡ ಜಾಗೃತ ಪರಿಷತ್ತು ಪದಾಧಿಕಾರಿಗಳಾದ ಎ.ಜಯರಾಮ್, ಡಿ.ಪಿ.ಆಂಜನೇಯ, ವೆಂಕಟರಾಜು, ವಿ.ಎಸ್.ಹೆಗಡೆ, ಜಿ.ಸುರೇಶ್, ಆರ್.ಗೋವಿಂದರಾಜು, ನಾಗರತ್ನಮ್ಮ ಸಫೀರ್, ದರ್ಗಾಜೋಗಿಹಳ್ಳಿ ಮಲ್ಲೇಶ್, ವಿದ್ಯಾರ್ಥಿನಿಲಯಗಳ‌ ಮೇಲ್ವಿಚಾರಕರುಗಳಾದ. ಸಿ.ಅಣ್ಣಯ್ಯ, ರೂಬಿಯಾ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಕಾವೇರಿ, ನಿಖಿತಾ, ನಂದಿನಿ, ವಿದ್ಯಾ ಮೊದಲಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!