
‘ದೃಶ್ಯ’ ಸಿನಿಮಾದ ಮಾದರಿಯಲ್ಲಿ ದೊಡ್ಡಬಳ್ಳಾಪುರದ ಹೊರವಲಯದ ನಾರಾಯಣ್ ಇನ್ಫೋಸಿಟಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಸೋಕೋ ತಂಡದೊಂದಿಗೆ ಶವವನ್ನು ಹೂತಿಟ್ಟ ಸ್ಥಳವನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಪರಿಶೀಲನೆ ವೇಳೆ ಶವದ ತಲೆ ಕೂದಲು, ಚಪ್ಪಲಿ ಸಿಕ್ಕಿದ್ದು, ಹೆಚ್ಚಿನ ಮಾಹಿತಿಗಾಗಿ ಮಧುರೆ ಕೆರೆಯಲ್ಲಿ ಮೂಳೆಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಅ.17ರಂದು ಸಂಜೆ 5.45 ಗಂಟೆ ಸಮಯದಲ್ಲಿ ದೇವರಾಜ್(65) ಬಾಶೆಟ್ಟಿಹಳ್ಳಿಯಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ನಿಂದ ಮತ್ತೆ ಮನೆಗೆ ಬಂದಿರುವುದಿಲ್ಲ. ಈ ಕುರಿತು ಮೃತ ದೇವರಾಜ್ ಕುಟುಂಬಸ್ಥರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲು ಮಾಡುತ್ತಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಚುರುಕು ತನಿಖೆ ಪ್ರಾರಂಭಿಸಿ, ವ್ಯಕ್ತಿಯ ಕೊಲೆಯಾಗಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆರೋಪಿಗಳಾದ ರಾಜಕುಮಾರ್, ಅನಿಲ್ ನನ್ನು ವಶಪಡಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ಘಟನೆ ವಿವರ
ಕೊಲೆ ಮಾಡಲು ಆರೋಪಿಗಳು ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ. ಕೊಲೆ ಮಾಡಿದ ನಂತೆ ಹೆಣವನ್ನು ಮುಚ್ಚಲು ದೊಡ್ಡಬಳ್ಳಾಪುರದ ಹೊರವಲಯದ ನಾರಾಯಣ್ ಇನ್ಫೋಸಿಟಿಯಲ್ಲಿ ಅ.15ರಂದು ಗುಂಡಿಯನ್ನು ಸಹ ತೆಗೆದಿರುತ್ತಾರೆ.

ಅ.17ರಂದು ಹಣ ಕೊಡುತ್ತೇನೆಂದು ಗೌರಿಬಿದನೂರು ಕಡೆ ಕರೆದುಕೊಂಡು ಹೋಗಿ ಕಾರಲ್ಲಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲ್ಲಲಾಗುತ್ತದೆ. ಕೊಲೆ ಮಾಡಿದ ನಂತರ ಅದೇ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ಈಗಾಗಲೇ ಗುಂಡಿ ತೋಡಿದ್ದ ಸ್ಥಳಕ್ಕೆ ಶವವನ್ನು ತೆಗೆದುಕೊಂಡು ಬಂದು ಗುಂಡಿಯಲ್ಲಿ ಮುಚ್ಚಲಾಗುತ್ತದೆ. ನಂತರ ಅನುಮಾನ ಬರುತ್ತದೆ ಎಂದು ಶವವನ್ನು ಗುಂಡಿಯಿಂದ ತೆಗೆದು ಗ್ಯಾರೇಜ್ ನಿಂದ ಮೆಟಲ್ ಡ್ರಂ ತಂದು ಅದರಲ್ಲಿ ಶವವನ್ನು ಹಾಕಿ ಸುಡಲಾಗುತ್ತದೆ. ಸುಟ್ಟ ನಂತರ ಬೂದಿಯನ್ನು ಮಧುರೆ ಕೆರೆಯಲ್ಲಿ ಹಾಕುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ..
ಈ ಹಿನ್ನೆಲೆ ಇಂದು ಹೆಣ ಹೂತಿಟ್ಟ ಸ್ಥಳಕ್ಕೆ ಪರಿಶೀಲನೆ ನಡೆಸಿದಾಗ ತಲೆಕೂದಲು, ಚಪ್ಪಲಿ ಸಿಕ್ಕಿದ್ದು, ಕೂಡಲೇ ಅವುಗಳನ್ನು ಪೊಲೀಸರು ಶೇಖರಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
17/10/2024 ರಂದು ಸಂಜೆ 5.50 ಗಂಟೆ ಸಮಯದಲ್ಲಿ ನಮ್ಮ ಯಜಮಾನರು ನಮ್ಮ ಮನೆಗೆ ಬಂದು ಮನೆಯಲ್ಲಿ ಇದ್ದಾಗ ಅವರ ಸ್ನೇಹಿತರಾದ ರಾಜಕುಮಾರ ಮತ್ತು ಅವರ ಜೊತೆಯಲ್ಲಿ ಒಬ್ಬರು ಕಪ್ಪಗಿರುವ ವ್ಯಕ್ತಿ ಇನ್ನೊವಾ ಕಾರಿನಲ್ಲಿ ಬಂದು ನಮ್ಮ ಯಜಮಾನರನ್ನು ಕರೆದರು. ನಮ್ಮ ಯಜಮಾನರು ಮತ್ತು ನಾನು ಹೊರಗೆ ಬಂದಾಗ ರಾಜಕುಮಾರ ನಮ್ಮ ಯಜಮಾನರಿಗೆ ನಿನ್ನ ಹಣವನ್ನು ಕೊಡುತ್ತೇನೆ ಗೌರಿಬಿದನೂರಿನಲ್ಲಿ ನನಗೆ ಒಬ್ಬರು ಹಣ ನೀಡಬೇಕು ಅವರ ಬಳಿ ಹೋಗಿ ಬರೋಣ ಬಾ ಎಂದು ಕರೆದರು. ಅದಕ್ಕೆ ನಮ್ಮ ಯಜಮಾನರು ನೀನೇ ಹೋಗಿ ಹಣವನ್ನು ಪಡೆದುಕೊಂಡು ಬಂದು ನನಗೆ ಕೊಡು ಎಂದು ಹೇಳಿದಾಗ ರಾಜಕುಮಾರ ನೀನು ಬಂದರೆ ನಿನ್ನ ಹಣವನ್ನು ಕೊಡುತ್ತೇನೆ ಬಾ ಬೇಗ ಬಂದು ಬಿಡೋಣ ಎಂದು ಹೇಳಿ ನಮ್ಮ ಯಜಮಾನರನ್ನು ಬಲವಂತದಿಂದ ತಮ್ಮ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋದರು. ನಮ್ಮ ಯಜಮಾನರಿಗೂ ಹಾಗೂ ರಾಜಕುಮಾರಿನಿಗೆ ರಿಯಲ್ ಎಸ್ಟೇಟ್ ಡಿಲಿಂಗ್ ಮತ್ತು ಸೆಕೆಂಡ್ಸ್ ಕಾರಿನ ಡಿಲಿಂಗ್ ನಲ್ಲಿ ವ್ಯವಹಾರವಿದ್ದು ನಮ್ಮ ಯಜಮಾನರಿಗೆ ರಾಜಕುಮಾರ 20 ರಿಂದ 30 ಲಕ್ಷ ಹಣವನ್ನು ನೀಡಬೇಕಾಗಿರುತ್ತದೆ ಎಂದು ನಮ್ಮ ಯಜಮಾನರು ನನಗೆ ತಿಳಿಸಿದ್ದರು.
ಯಾವುದೋ ಹಣದ ಬಗ್ಗೆ ಮಾತನಾಡಿಕೊಂಡಿರಬೇಕು ಎಂದು ಸುಮ್ಮನಾಗಿದ್ದೇನು, ರಾಜಕುಮಾರನ ಜೊತೆಯಲ್ಲಿ ಬಂದಿದ್ದ ವ್ಯಕ್ತಿ ನಮ್ಮ ಯಜಮಾನರ ದ್ವಿಚಕ್ರ ವಾಹನದ ಕೀಯನ್ನು ನಮ್ಮ ಯಜಮಾನರಿಂದ ಪಡೆದುಕೊಂಡು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಕಾರಿನ ಹಿಂದೆ ಹೋದನು. ಅಂದಿನಿಂದ ನಮ್ಮ ಯಜಮಾನರು ನಮ್ಮ ಮನೆಗೆ ಬಾರದೆ ಇದ್ದು ಈ ವಿಚಾರವಾಗಿ ನಮ್ಮ ಅಕ್ಕನ ಮಗ ಮೋಹನ್ ಕುಮಾರ್ ದೂರು ನೀಡಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು. ನಮ್ಮ ಯಜಮಾನರ ದ್ವಿಚಕ್ರ ವಾಹನದ ವಿಜಯಪುರ ಬಳಿ ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ ನಂತರ ನಮಗೆ ರಾಜಕುಮಾರ ಮತ್ತು ಕಪ್ಪಗಿರುವ ವ್ಯಕ್ತಿಯ ಮೇಲೆ ಅನುಮಾನ ಬಂದು ನಾವು ಮನೆಯಲ್ಲಿ ಮಾತನಾಡಿಕೊಂಡು ಈ ದಿನ ಬಂದು ದೂರು ನೀಡುತ್ತಿರುತ್ತೇವೆ. ನಮ್ಮ ಯಜಮಾನರನ್ನು ರಾಜಕುಮಾರ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಕಪ್ಪಗಿರುವ ವ್ಯಕ್ತಿ ಕಿಡ್ನಾಪ್ ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನವಿದ್ದು ಅವರನ್ನು ಕರೆದು ವಿಚಾರ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಜರುಗಿಸಬೇಕೆಂದು ಮೃತನ ಹೆಂಡತಿ ದೂರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡುತ್ತಾರೆ.

ಮೊದಲು ಠಾಣೆಗೆ ದೂರು ನೀಡುವ ದಿನದಂದು ಮೃತನ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ಪ್ರಮುಖ ಕೊಲೆ ಆರೋಪಿ ರಾಜಕುಮಾರ್ ಸಹ ಕೊಲೆಗೂ ನನಗೂ ಏನೂ ಸಂಬಂಧವಿಲ್ಲವೆಂದು ಅಮಾಯಕನ ರೀತಿ ಬಂದಿರುತ್ತಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.