ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಸೇವಾದಳದ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಭಾರತ ಸೇವಾದಳದ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ನಂಜುಂಡೇಗೌಡ ತಿಳಿಸಿದರು.
ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದ ಬಳಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಭಾರತ ಸೇವಾದಳ ಮಾಡಿತು. ಸ್ವಾತಂತ್ರ್ಯ ನಂತರ ರಾಷ್ಟ್ರ ಪ್ರೇಮ, ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಕೆಲಸವನ್ನು ಭಾರತ ಸೇವಾದಳ ಸಂಘಟನೆ ನಿರಂತರವಾಗಿ ಮಾಡುತ್ತಿದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ತಾಲ್ಲೂಕಿನ ಟಿ.ಸಿದ್ದಲಿಂಗಯ್ಯ, ಎಚ್.ಮುಗುವಾಳಪ್ಪ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ನಾ.ನಂಜುಂಡಯ್ಯ, ದಾನಪ್ಪ ಮುಂತಾದವರು ಸ್ವಾತಂತ್ರ್ಯ ಹೋರಾಟಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ರಾಷ್ಟ್ರಮಟ್ಟದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ನಾವು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕಾಗಿದೆ ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಮಹಾದೇವ್ ಮಾತನಾಡಿ, ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನತೆ, ಸಂರಕ್ಷಣೆಯೊಂದಿಗೆ ಸಂವಿಧಾನದ ಆಶಯಗಳು ಸಕಾರಗೊಳ್ಳಬೇಕು. ಸಮಾನತೆ ದೇಶದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಕೋಶಾಧ್ಯಕ್ಷ ನಂ.ಮಹಾದೇವ್, ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಭಾರತ ಸೇವಾದಳದ ಶಾಖಾಧಿಕಾರಿ ಎಸ್.ಬೋರಪ್ಪ, ಭಾರತ ಸೇವಾದಳದ ತಾಲ್ಲೂಕು ಕಾರ್ಯದರ್ಶಿ ಹಮಾಮ್ ವೆಂಕಟೇಶ್, ಉಪಾಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಜ್ಯೋತಿಕುಮಾರ್, ಜಿಲ್ಲಾ ಕನ್ನಡ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕಸಬಾ ಹೋಬಳಿ ಘಟಕ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಮುನಿರಾಜು ಮೊದಲಾದವರು ಭಾಗವಹಿಸಿದ್ದರು.