ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಪಂಚಾಯಿತಿ ವ್ಯಾಪ್ತಿಯ ಭೋವಿಪಾಳ್ಯ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಚರಂಡಿಗಳು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟದಿಂದಾಗಿ ಮಲೇರಿಯಾ ಮತ್ತಿತರ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.
ಆಗಾಗ ಮಳೆಯಾಗುತ್ತಿರುವುದರಿಂದ ಚರಂಡಿಗಳಲ್ಲಿ ನೀರು ನಿಂತು ಕಸ ಕಡ್ಡಿ ಕೊಳೆತು ನಾರುತ್ತದೆ. ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು, ಕಳೆದ ವರ್ಷವೇ ಖುದ್ದು ಶಾಸಕ ಧೀರಜ್ ಮುನಿರಾಜ್ ಅವರೇ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರೂ ಏನೂ ಉಪಯೋಗವಾಗಿಲ್ಲ. ಕಸ-ಕಡ್ಡಿಗಳಿಂದ ಚರಂಡಿಗಳು ತುಂಬಿದ್ದರೂ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾತ್ರ ಮಾಡುತ್ತಿಲ್ಲ ಎಂದು ಊರಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಇದೇ ಗ್ರಾಮದಲ್ಲಿ ಕೆಲ ಮನೆಗಳ ಮುಂದೆ ಸುಮಾರು 5 ವರ್ಷಗಳಿಂದ ಚರಂಡಿ ವ್ಯವಸ್ಥೆ ಇಲ್ಲದೇ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಇನ್ನು ಕೆಲವು ಮನೆಗಳ ಮುಂದೆ ಚರಂಡಿಗಳು ಇದ್ದರೂ ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವವರು ಇಲ್ಲ ಎಂದು ದೂರಿದ್ದಾರೆ.
ಇನ್ನಾದರೂ ಚರಂಡಿ ಸ್ವಚ್ಛತೆ ಮಾಡಿಸಿ ಸೊಳ್ಳೆಗಳ ಕಾಟದಿಂದ, ರೋಗ ರುಜಿನಗಳಿಂದೆ ನಮ್ಮನ್ನು ರಕ್ಷಿಸಬೇಕೇಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಂಚಾಯಿತಿ ವತಿಯಿಂದ ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಸ್ವಚ್ಛವಾಗದ ಚರಂಡಿಗಳನ್ನು ಸಹ ಕೂಡಲೇ ಸ್ವಚ್ಛ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳ ಸ್ವಚ್ಛತೆಯೇ ನಮ್ಮ ಆದ್ಯತೆ ಎಂದು ಪಂಚಾಯಿತಿ ಅಧಿಕಾರಿ ತಿಳಿಸಿದ್ದಾರೆ.