ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ರಸ್ತೆಯ ಎಲ್ಐಸಿ ಕಚೇರಿ ಸಮೀಪದ ಇಂಪೀರಿಯರ್ ಸೋಫಾ ಸೇಟ್ ಅಂಗಡಿ ಹಾಗೂ ಕೃಷ್ಣಪ್ಪ ಗ್ರ್ಯಾನೈಟ್ ಅಂಗಡಿಗಳ ಮೇಲ್ಛಾವಣಿಯ ತಗಡಿನ ಶೀಟ್ ಗಳನ್ನು ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಬರಿಗೈಯಲ್ಲಿ ಹೋಗಿರುವ ಪ್ರಕರಣ ಬುಧವಾರ ರಾತ್ರಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದೇ ರಸ್ತೆಯ ಬದಿಯಲ್ಲಿನ ಮನೆಗಳ ಬಳಿ ನಿಲ್ಲಿಸಿದ್ದ ಲಾರಿ, ನೀರಿನ ಟ್ಯಾಂಕರ್ಗಳಲ್ಲಿ ಬ್ಯಾಟರಿ, ಡೀಸೆಲ್ ಸೇರಿದಂತೆ ಇತರೆ ವಸ್ತುಗಳನ್ನು ನಾಲ್ಕು ದಿನಗಳ ಹಿಂದೆಯಷ್ಟೇ ಕಳವು ಮಾಡಲಾಗಿತ್ತು. ಈ ಕಳವು ಪ್ರಕರಣ ಮರೆಯುವ ಮುನ್ನವೇ ಬುಧವಾರ ರಾತ್ರಿ ಅಂಗಡಿಯ ಮೇಲ್ಛಾವಣಿ ತಗಡಿನ ಶೀಟ್ಗಳನ್ನು ಕತ್ತರಿಸಿ ಒಳಗೆ ಇಳಿದಿರುವುದು ನಗರದ ಇತರೆ ಅಂಗಡಿ ಮಾಲೀಕರ ನಿದ್ದೆಗಡೆಸಿದೆ.
ಸೋಫಾ ಹಾಗೂ ಗ್ರ್ಯಾನೈಟ್ ಅಂಗಡಿಗಳ ಗಲ್ಲಾ ಪೆಟ್ಟಿಗೆಯಲ್ಲಿ ಒಂದೆರಡು ಸಾವಿರ ಚಿಲ್ಲರೆ ಹಣ ಬಿಟ್ಟರೆ ಇತರೆ ಬೆಲೆ ಬಾಳುವ ವಸ್ತುಗಳು ಇರಲಿಲ್ಲ. ಸೋಫಾ ಸೆಟ್ಗಳನ್ನು ಮೇಲ್ಛಾವಣಿ ಮೂಲಕ ಸಾಗಿಸಲು ಸಾಧ್ಯವಾಗದೆ ಚಿಲ್ಲರೆ ಕಾಸಿಗಷ್ಟೆ ತೃಪ್ತಿಪಟ್ಟು ಹೋಗಿದ್ದಾರೆ. ಅಂಗಡಿಯಲ್ಲಿನ ಇತರೆ ವಸ್ತುಗಳಿಗೆ ಯಾವುದೇ ರೀತಿಯ ಹಾನಿಯನ್ನು ಮಾಡಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.