ರಾಖಿ ಹಬ್ಬದಂದು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(TGSRTC) ಬಸ್ಸಿನಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಹಿಳಾ ಕಂಡಕ್ಟರ್ ಮಾನವೀಯತೆ ಮೆರೆದಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ನಲ್ಲಿಯೇ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಸ್ಪಂದಿಸಿ ಬಸ್ ನಲ್ಲಿ ಹೆರಿಗೆ ಮಾಡಿಸಿದ್ದಾರೆ. ನಂತರ, ತಾಯಿ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸೋಮವಾರ ಬೆಳಗ್ಗೆ ಗದ್ವಾಲ-ವನಪರ್ತಿ ಮಾರ್ಗದ ಗ್ರಾಮದ ಬೆಳಕು ಬಸ್‌ನಲ್ಲಿ ರಕ್ಷಾಬಂಧನದ ನಿಮಿತ್ತ ತಮ್ಮ ಸಹೋದರರಿಗೆ ರಾಖಿ ಕಟ್ಟಲು ಗದ್ವಾಲ ದೀಪೋಣದ ಗರ್ಭಿಣಿ ಸಂಧ್ಯಾ ವನಪರ್ತಿಗೆ ತೆರಳುತ್ತಿದ್ದರು.
ಬಸ್ ನಾಚಹಳ್ಳಿ ತಲುಪಿದ ಕೂಡಲೇ ಗರ್ಭಿಣಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತ ಮಹಿಳಾ ಕಂಡಕ್ಟರ್ ಜಿ.ಭಾರತಿ ಬಸ್ ನಿಲ್ಲಿಸಿದರು. ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನರ್ಸ್ ಸಹಾಯದಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ.
ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನನ ನಂತರ 108 ಸಹಾಯದಿಂದ ತಾಯಿ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಸದ್ಯ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.