
ಅಸಮಾನತೆಯಿರುವ ಸಮಾಜದಲ್ಲಿ ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೆಇಬಿ ಇಂಜಿನಿಯರ್ ಅಸೋಸಿಯೇಷನ್ನ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ 17ನೇ ರಾಜ್ಯ ಮಟ್ಟದ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿಯೋಜಕರು, ನ್ಯಾಯ ಸಂರಕ್ಷಕರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವೆಲ್ಲವೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿರಾಜ್ಯ ಸ್ಥಾಪನೆ ಸಾಧ್ಯ. ಸಮಾಜದ ಜನರ ಹಿತ ಕಾಪಾಡುವುದು ನಮ್ಮೆಲ್ಲರ ಕೆಲಸ. ನಾಗರಿಕ ಸುರಕ್ಷಾ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕಾಯ್ದೆಯ ಸೆಕ್ಷನ್ 8 ಮತ್ತು 9ರ ಪ್ರಕಾರ ಅಭಿಯೋಜಕರನ್ನು ವಿಂಗಡಿಸಿ, ಕರ್ತವ್ಯಗಳನ್ನು ಹೇಳಿದ್ದಾರೆ. ಆರೋಪಿಗಳ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ನಿಯಮ ರೂಪಿಸಿದೆ. ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದರು.
ಆರೋಪಿಗಳ ಪರವಾಗಿರುವ ಸಾಕ್ಷ್ಯಾಧಾರಗಳನ್ನೂ ನ್ಯಾಯಾಲಯದ ಗಮನಕ್ಕೆ ತರುವುದು ಅಭಿಯೋಜಕರ ಆದ್ಯ ಕರ್ತವ್ಯ. ತನಿಖಾಧಿಕಾರಿಗಳ ಜೊತೆ ಮಾತನಾಡುವುದು, ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮಾಡುವಾಗ ಎಚ್ಚರಿಕೆಯಿಂದ ಮಾಡಿದರೆ ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಎನ್.ಸಿ.ಆರ್.ಬಿ ವರದಿ ಪ್ರಕಾರ ಶಿಕ್ಷೆ ಪ್ರಮಾಣ ದರದಲ್ಲಿ ಕರ್ನಾಟಕ, ಬಿಹಾರ ಮತ್ತು ರಾಜಸ್ಥಾನ 22ನೇ ಸ್ಥಾನದಲ್ಲಿವೆ. ಇಲ್ಲಿ ಶಿಕ್ಷೆ ಪ್ರಮಾಣ 52%. ಕೇರಳದಲ್ಲಿ 87% ರಷ್ಟಿದೆ, ಮಿಜೋರಾಂ 92%, ಗುಜರಾತ್ ಮತ್ತು ತೆಲಂಗಾಣ 57%, ಉತ್ತರ ಪ್ರದೇಶದಲ್ಲಿ 72%, ದೆಹಲಿ 89% ರಷ್ಟಿದೆ. ನಾವು ಕೇರಳ ರಾಜ್ಯದೊಂದಿಗೆ ಹೋಲಿಸಿಕೊಳ್ಳಬೇಕು, ಆಗ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಸಮಸ್ಯೆಗಳ ಹೊರತಾಗಿಯೂ ನ್ಯಾಯ ಒದಗಿಸಬೇಕು. ಸೈಬರ್ ಅಪರಾಧಗಳು, ಆರ್ಥಿಕ ಅಪರಾಧಗಳು ವ್ಯಾಪಕವಾಗಿವೆ, ಇದನ್ನು ಮಟ್ಟಹಾಕಲು ತರಬೇತಿ ಕೂಡ ಅತ್ಯಂತ ಅವಶ್ಯಕ. ಅಭಿಯೋಜಕರು ನಿರಂತರ ಅಧ್ಯಯನ ಮಾಡಬೇಕು ಎಂದರು.
ಪ್ರತಿ ವರ್ಷವೂ ಸಮ್ಮೇಳನಗಳ ಜರುಗಬೇಕು. ಅಭಿಯೋಜಕರ ಅಕಾಡೆಮಿ ಸ್ಥಾಪಿಸಿ ಅನುದಾನವನ್ನೂ ನೀಡಲು ಕ್ರಮ ವಹಿಸುತ್ತೇವೆ, ಜೊತೆಗೆ ಬೇಡಿಕೆಗಳನ್ನು ಸಹ ಪರಿಶೀಲಿಸಲಾಗುವುದು ಎಂದು ಹೇಳಿದರು.