ಸೈನಿಕರ ಜೀವವೂ ಅತ್ಯಮೂಲ್ಯ….
ಅವರು ಸಹ ತಾಯಿಯ ಕರುಳಿನ ಕುಡಿಗಳೇ, ಸಂಯಮವಿರಲಿ……
ಯಾವುದೋ ಧಾರಾವಾಹಿ, ಸಿನಿಮಾ, ನಾಟಕದ ಭಾವನಾತ್ಮಕ ದೃಶ್ಯಗಳನ್ನು ನೋಡುವಾಗಲೇ ಅಥವಾ ಯಾವುದಾದರೂ ನೋವಿನ, ಸಂಕಷ್ಟದ, ಕಥೆ, ಕಾದಂಬರಿ, ಕವಿತೆ ಓದುವಾಗಲೇ
ನಮಗರಿವಿಲ್ಲದಂತೆ ದುಃಖದಿಂದ ಕಣ್ಣಿನಲ್ಲಿ ಧಾರಾಕಾರ ನೀರು ಸುರಿಯುತ್ತದೆ. ಯಾರದೋ ಅಪರಿಚಿತರ ಸಾವು ನಮ್ಮನ್ನು ಕದಡುತ್ತದೆ. ಅಷ್ಟೊಂದು ಭಾವ ಜೀವಿಗಳು ನಾವು.
ಆದರೆ ಕಾಶ್ಮೀರದ ಪೆಹಲ್ಗಾವ್ ನಲ್ಲಿ ಆ ಹೆಣ್ಣು ಮಕ್ಕಳು ಮತ್ತು ಪುಟ್ಟ ಮಕ್ಕಳು ತಮ್ಮ ಕಣ್ಣೆದುರೇ ಗಂಡನನ್ನು, ತಂದೆಯನ್ನು ಭಯೋತ್ಪಾದಕ ನರರಾಕ್ಷಸರು ಗುಂಡಿಕ್ಕೆ ಕೊಲ್ಲುವುದನ್ನ ಕಣ್ಣಾರೆ ನೋಡಿದ್ದಾರೆಂದರೆ, ಅವರ ಮನೋವೇದನೆ ಎಷ್ಟಿರಬಹುದು, ನಿಜಕ್ಕೂ ಊಹಿಸಲಸಾಧ್ಯ. ಇದು ನಿರಂತರವಾಗಿ ಬದುಕಿನ ಕೊನೆಯವರೆಗೂ ಅವರನ್ನು ಕಾಡಬಹುದು. ಇಡೀ ದೇಶ ಅವರ ಸಾವಿಗೆ ಮಿಡಿದಿದೆ ಎಂಬ ಕಾರಣದಿಂದ ಸ್ವಲ್ಪ ಸಮಾಧಾನ ಹೊಂದಬಹುದು.
ಭಾರತದ ಇತಿಹಾಸದಲ್ಲಿ ರಾಜ್ಯಗಳು ಸ್ಥಾಪಿತವಾಗಿರುವುದು, ರಾಜ್ಯಗಳು ನಾಶವಾಗಿರುವುದು ಯುದ್ಧಗಳ ಮೂಲಕವೇ, ಘರ್ಷಣೆಯ ಮೂಲಕವೇ,
ದಾಳಿಗಳ ಮೂಲಕವೇ, ರಕ್ತಪಾತದ ಮೂಲಕವೇ,
ಕೊಲೆ, ಹತ್ಯೆಯಂತಹ ಸಾವುಗಳ ಮೂಲಕವೇ. ಅಂದರೆ ಈ ರೀತಿಯ ಹಿಂಸೆ ಹೊಸದೇನು ಅಲ್ಲ. ಕಾಶ್ಮೀರಿವಂತು ಸ್ವಾತಂತ್ರ್ಯ ನಂತರ ರಕ್ತದ ಕೋಡಿಯನ್ನೇ ಹರಿಸಿದೆ.
ಪ್ರಾಕೃತಿಕ ವಿಕೋಪ, ಸಾಂಕ್ರಾಮಿಕ ರೋಗ, ಯುದ್ಧ, ಇತ್ತೀಚಿನ ಈ ಭಯೋತ್ಪಾದನೆಗಳು ಜನರನ್ನು ಸಾಮೂಹಿಕವಾಗಿ ಸಾಯುವಂತೆ ಮಾಡುತ್ತಿದೆ. ಆದರೆ ಈ ಭಯೋತ್ಪಾದಕ ಹತ್ಯೆ ಎಲ್ಲಕ್ಕಿಂತ ಅತ್ಯಂತ ಘೋರ, ಧಾರಣ ಮತ್ತು ಸ್ವಯಂಕೃತ ಅಪರಾಧ. ಇದನ್ನು ನಿಗ್ರಹಿಸುವ ಎಲ್ಲ ಸಾಧ್ಯತೆಯೂ ಇದೆ.
ಈಗ ಈ ಕಾಶ್ಮೀರದ ಭಯೋತ್ಪಾದಕರನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ಸೈನ್ಯ ಸಮರ್ಥವಾಗಿದೆ. ಅದು ಒಂದಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳುತ್ತದೆ. ಅದು ಅದರ ಜವಾಬ್ದಾರಿ ಮತ್ತು ಕರ್ತವ್ಯ ಸಹ. ಆದರೆ ನಮ್ಮ ಈ ಎಲೆಕ್ಟ್ರಾನಿಕ್ ಮೀಡಿಯಾಗಳ ಯುದ್ಧೋನ್ಮಾದವನ್ನು, ಪರಾಕ್ರಮವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಏನು ಆಕ್ರೋಶ, ಏನು ಕೆಚ್ಚು, ಏನು ರೊಚ್ಚು, ಏನು ಧೈರ್ಯ, ಏನು ಶಕ್ತಿ, ಅಬ್ಬಬ್ಬಾ….! ಅವರ ಮಾತುಗಳನ್ನು ಕೇಳಲು, ಅವರ ಹಾವಭಾವಗಳನ್ನು ನೋಡಲು ಎರಡು ಕಣ್ಣು ಸಾಕಾಗುತ್ತಿಲ್ಲ.
ಅವರ ಆ ಕೆಚ್ಚಿಗೆ, ರೊಚ್ಚಿಗೆ ಶಾಂತಿ ಪ್ರಿಯ ಮನಸ್ಸುಗಳು ಮುದುಡಿ ಹೋಗಿವೆ. ಆದ್ದರಿಂದ ಅವರ ಆ ಉತ್ಸಾಹಕ್ಕೆ ಭಂಗ ಬಾರದಂತೆ, ವ್ಯರ್ಥವಾಗದಂತೆ ನಮ್ಮ ಈ ಭಯೋತ್ಪಾದನಾ ಸಮಸ್ಯೆಯನ್ನು ಮತ್ತು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಏಕಕಾಲಕ್ಕೆ ದ್ವಂಸ ಮಾಡಬಹುದಾದ ಒಂದು ಸಾಧ್ಯತೆ ಇದೆ. ಅದಕ್ಕಾಗಿ ಮಾನ್ಯ ರಾಷ್ಟ್ರಪತಿಗಳಿಗೆ ಈ ಮೂಲಕ ಒಂದು ಮನವಿ……
ಗೌರವಾನ್ವಿತ,
ಭಾರತದ ರಾಷ್ಟ್ರಪತಿಗಳಿಗೆ
ಒಂದು ಕಳಕಳಿಯ ಮನವಿ……..
**************************
ಮಾನ್ಯರೆ,
ಇತ್ತೀಚಿನ ಭಯೋತ್ಪಾದಕರ ಚಟುವಟಿಕೆಗಳನ್ನು, ಬೆಳವಣಿಗೆಗಳನ್ನು ಗಮನಿಸಿದಾಗ, ಅದಕ್ಕೆ ಭಾರತದ ಪ್ರತಿಕ್ರಿಯೆ ಅನಿವಾರ್ಯವಾದಾಗ
ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ನಮ್ಮ ದೇಶದ ನಡುವೆ ಯುದ್ದವಾಗುವ ಸಾಧ್ಯತೆ ಇದೆ. ಪ್ರತ್ಯಕ್ಷ ಯುದ್ದವಾದರೆ ಅದನ್ನು ತಡೆಯುವ ಶಕ್ತಿ ನಮ್ಮ ಸೈನ್ಯಕ್ಕೆ ಇದೆ. ಆದರೆ ಕುತಂತ್ರಿ ಪಾಕಿಸ್ತಾನ ಭಯೋತ್ಪಾದಕರನ್ನು ಒಳನುಗ್ಗಿಸಿ ಪರೋಕ್ಷ ಯುದ್ಧ ಮಾಡುವ ಸಾಧ್ಯತೆಗಳೇ ಹೆಚ್ಚು.
ಗೌರವಾನ್ವಿತರೆ,
ಅದಕ್ಕೆ ಪೂರಕವಾಗಿ ಈ ನನ್ನ ಮನವಿ. ತಾವು ದಯವಿಟ್ಟು ಇದನ್ನು ತಡೆಯಲು ನಮ್ಮ ಕಡೆಯಿಂದ ಒಂದು ಆತ್ಮಹತ್ಯಾದಳ ರಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಆ ದಳಕ್ಕೆ ಸೇರುವ ಜನರ ಬಗ್ಗೆ ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಈಗಾಗಲೇ ಇಡೀ ಭಾರತದ ಟಿವಿ ಮಾಧ್ಯಮಗಳ ಪತ್ರಕರ್ತರು, ನಿರೂಪಕರಲ್ಲಿ ಕೆಲವರು ಇದಕ್ಕೆ ಸಿದ್ದರಿರುವುದಾಗಿ ಅವರ ಪ್ರತಿನಿತ್ಯದ ಮಾತುಗಳನ್ನು ಕೇಳಿದಾಗ ನನಗೆ ಸ್ಪಷ್ಟವಾಯಿತು.
ನಮ್ಮ ಕರ್ನಾಟಕವೂ ಸೇರಿದಂತೆ ಅನೇಕ ಟಿವಿ ಪತ್ರಕರ್ತರ ನಿರೂಪಣೆಯ ಶೈಲಿ, ಮಾತು, ಸಂದರ್ಭ ಆ ಅರ್ಥಗಳನ್ನೇ ಪ್ರತಿಬಿಂಬಿಸುತ್ತಿದೆ.
ಇವರ ಜೊತೆ ಸಹಾಯಕರಾಗಿ ಅವರಿಗೆ ಮಾರ್ಗದರ್ಶನ ಮಾಡಲು ಬಹುತೇಕ ಅವರ ಜೊತೆಗಾರರೇ ಆಗಿರುವ ಟಿವಿ ಜ್ಯೋತಿಷಿಗಳನ್ನು ಕರೆದೊಯ್ಯಲು ಸಹ ತಾವು ಅನುಮತಿ ನೀಡಬೇಕು. ಅವರು ಮುಂದೊದಗಬಹುದಾದ ಅಪಾಯಗಳನ್ನು ಮೊದಲೇ ಊಹಿಸಿ ಇವರಿಗೆ ಮಾರ್ಗದರ್ಶನ ಮಾಡುತ್ತಾರೆ. ಇದರಿಂದ ನಮ್ಮ ಕಡೆ ಯಾವುದೇ ಹಾನಿಯೂ ಆಗದಂತೆ ತಡೆಯಬಹುದು. ಜೊತೆಗೆ ಆಸಕ್ತಿ ಇರುವ ನಮ್ಮ ಕೆಲವು ಸಿನಿಮಾ ನಟ ನಟಿಯರು ಸಹ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಬಹುದು.
ಅಲ್ಲದೆ ನೀವು ಇವರ ತರಬೇತಿಗಾಗಿ ಯಾವುದೇ ಹಣ ಮತ್ತು ಸಮಯ ಖರ್ಚು ಮಾಡಬೇಕಾಗಿಲ್ಲ. ಏಕೆಂದರೆ ಇವರೆಲ್ಲಾ ಈಗಾಗಲೇ ದೇಶಕ್ಕಾಗಿ ತಮ್ಮ ಪ್ರಾಣತ್ಯಾಗಕ್ಕೆ ಸರ್ವ ಸನ್ನದ್ಧರಾಗಿದ್ದಾರೆ.
ಈ ಕ್ರಮದಿಂದ ನಮ್ಮ ಸೈನ್ಯದ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ.
ಪಾಪ ನಮ್ಮ ಸೈನಿಕರು ಈಗಾಗಲೇ ಹಲವಾರು ವರ್ಷಗಳಿಂದ ಬಹಳಷ್ಟು ದಣಿದಿದ್ದಾರೆ. ಅವರಿಗೆ ಸ್ವಲ್ಪ ವಿಶ್ರಾಂತಿ ನೀಡೋಣ. ಒಂದು ವೇಳೆ ಈ ಪತ್ರಕರ್ತರು ವಿಫಲರಾದರೆ ಹೇಗಿದ್ದರೂ ನಮ್ಮ ಸೈನಿಕರು ಇದ್ದೇ ಇರುತ್ತಾರೆ.
ಆದ್ದರಿಂದ ತಾವು ದಯವಿಟ್ಟು ನನ್ನ ಮನವಿಯನ್ನು ಪರಶೀಲಿಸಬೇಕೆಂದು ಆ ಮುಖಾಂತರ ಈ ರಣೋತ್ಸಾಹಿ ಪತ್ರಕರ್ತರು ಮತ್ತು ಜ್ಯೋತಿಷಿಗಳ ದೇಶಭಕ್ತಿ ಪ್ರದರ್ಶಿಸಲು ಅನುವು ಮಾಡಿಕೊಡಬೇಕೆಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ.
ಅವರ ದೇಶಭಕ್ತಿಯ ಮಾತು ಕೇಳಿ ನನ್ನ ಬಗ್ಗೆ ನನಗೇ ಜಿಗುಪ್ಸೆಯಾಗಿ ಈ ಪತ್ರ ಬರೆಯಬೇಕಾಯಿತು. ಕ್ಷಮೆ ಇರಲಿ
ಧನ್ಯವಾದಗಳು.
ಇಂತಿ, ಗೌರವಪೂರ್ವಕವಾಗಿ,
+++++++++++++++++++
ನೆನಪಿಡಿ……….
ಪ್ರಾಣ ತ್ಯಾಗ ಮಾಡಿ, ರಕ್ತ ಹರಿಸಿಯಾದರೂ ದೇಶ ಕಾಪಾಡುವುದು ಸೈನಿಕ ಧರ್ಮ,
ಜ್ಞಾನ ಹರಿಸಿ, ವಿವೇಚನೆ ಬಳಸಿ,
ಸತ್ಯ ನುಡಿಯುವುದು ಪತ್ರಕರ್ತರ ಧರ್ಮ,
ಆಧ್ಯಾತ್ಮಿಕ ಬಲದಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಧಾರ್ಮಿಕ ನಾಯಕರ ಧರ್ಮ,
ತ್ಯಾಗ ಮಾಡಿ ನೆಲ ಕಾಪಾಡುವುದು ನಾಗರೀಕ ಧರ್ಮ,…….
ಇದು ತಮಾಷೆಗಾಗಿ ಬರೆದದ್ದು.
ಅವರೇನು ಪ್ರಾಣತ್ಯಾಗ ಮಾಡುವುದು ಬೇಡ. ಅವರೂ ನಮ್ಮ ಬಂಧುಗಳೇ. ಅವರ ಜೀವವೂ ಅತ್ಯಮೂಲ್ಯ.
ಆದರೆ ಒಂದಷ್ಟು ಸಂಯಮ, ಪ್ರಬುದ್ಧತೆ ಮತ್ತು ವಿವೇಚನೆಯಿಂದ ವರ್ತಿಸಿದರೆ ಅಷ್ಟೇ ಸಾಕು.
ಕ್ಷಮೆ ಇರಲಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ, ಎಚ್. ಕೆ