ಮೇ.10ರಂದು ನಡೆಯಲಿರುವ 2023ರ ವಿಧಾನಸಭಾ ಚುನಾವಣೆಗೆ ಮತದಾರರಲ್ಲಿ ಮತದಾನ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಸ್ವಯಂಪ್ರೇರಿತವಾಗಿ ಯುವಕರು ಸೈಕಲ್ ಜಾಥಾ ಹಮ್ಮಿಕೊಂಡಿದ್ದರು.
ನಗರದ ತಾಲ್ಲೂಕು ಕಚೇರಿ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ ಗಣಪತಿ ದೇವಾಲಯ, ಚೌಕದ ಸರ್ಕಲ್, ಸೌಂದರ್ಯ ಮಹಲ್ ಚಿತ್ರ ಮಂದಿರ, ಹಳೆ ಸರ್ಕಾರಿ ಆಸ್ಪತ್ರೆ ವೃತ್ತ, ಲಕ್ಷ್ಮೀ ಚಿತ್ರಮಂದಿರ, ತೇರಿನ ಬೀದಿ, ಕೆಸಿಪಿ ಕಲ್ಯಾಣ ಮಂಟಪ, ಕೊಂಗಾಡಿಯಪ್ಪ ಕಾಲೇಜು ರಸ್ತೆ ಸೇರಿದಂತೆ ಹಲವು ಮಾರ್ಗಗಳಲ್ಲಿ ‘ಮತದಾನ ತಪ್ಪದೇ ಮಾಡಿ’ ಎಂಬ ಜಾಗೃತಿ ಫಲಕಗಳನ್ನು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥ ನಡೆಸಿದರು.
ಈ ವೇಳೆ ಮಾತನಾಡಿದ ಸೈಕಲ್ ಜಾಥಾ ತಂಡದ ಕಾರ್ತಿಕ್, ನಮ್ಮ ತಂಡ ಯಾವುದೇ ರಾಜಕೀಯ ವ್ಯಕ್ತಿ ಪರವಾಗಿಯಾಗಲಿ , ಪಕ್ಷದ ಪರವಾಗಿಯಾಗಲಿ ಪ್ರಚಾರ ಮಾಡುತ್ತಿಲ್ಲ. ಬದಲಿಗೆ 2023ರ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಇನ್ನು ಎರಡೇ ದಿನ ಬಾಕಿ ಇದ್ದೂ ತಾಲ್ಲೂಕಿನ ಅಭಿವೃದ್ದಿ ಮಾಡಲು ಯಾರು ಯೋಗ್ಯರೋ ಅಂಥವರನ್ನು ಗಮನದಲ್ಲಿರಿಸಿಕೊಂಡು ಮತದಾನ ಮಾಡುವಂತೆ ಮನವಿ ಮಾಡಿದರು.
ಶ್ರೀಕಾಂತ್ ಜನಾರ್ಧನ್ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಎಲ್ಲಾ ಜನತೆ ತಪ್ಪದೇ ಮತ ಹಾಕಿ, ರಾಜಕಾರಣಿಗಳ ಆಮಿಷಕ್ಕೆ ಒಳಗಾಗಬೇಡಿ, ನಿಮ್ಮ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ, ತಾಲ್ಲೂಕಿನ ಅಭಿವೃದ್ದಿಯ ದೃಷ್ಟಿಯಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸಲುವಾಗಿ ಮತದಾನ ತಪ್ಪದೇ ಮಾಡಿ ಎಂದು ಮನವಿ ಮಾಡಿದರು.
ಈ ವೇಳೆ ಅಭಿಷೇಕ್, ವಿಜಯ್ ಸಾಗರ್, ಗಿರೀಶ್, ಶಶಾಂಕ್ ಇದ್ದರು.