ಸೂರು ಕಳೆದಕೊಂಡ ಬಡ ಕುಟುಂಬ: ಬೀದಿಗೆ ಬಂದ ತಾಯಿ ಮತ್ತು ಮಕ್ಕಳು: ಅಧಿಕಾರಿಗಳು, ಜನಪ್ರತಿನಿಧಿಗಳ ಅಸಡ್ಡೆ

ಮೊದಲೇ ಕಿತ್ತು ತಿನ್ನುವ ಬಡತನ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಆ ಬಡ ಕುಟುಂಬಕ್ಕೆ ಸಮಸ್ಯೆ ಮೇಲೆ ಸಮಸ್ಯೆ, ಇದೆಲ್ಲದರ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆ ಸಿಡಿಲು ಬಡಿದಂತೆ ಎದುರಾಗಿ‌ ಸಂಪೂರ್ಣವಾಗಿ ಬೀದಿಗೆ ಬರುವಂತಾಗಿದೆ.

ಸರಕಾರ ಬಡತನ ನಿರ್ಮೂಲನೆ ಮಾಡಬೇಕು, ಯಾರೂ ಸೂರು ಇಲ್ಲದೆ ಬೀದಿಯಲ್ಲಿ ವಾಸ ಮಾಡಬಾರದು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಯಾರೂ ಕೂಡ ಹಸಿವಿನಿಂದ ಮಲಗಬಾರದು ಎಂಬ ಸದುದ್ದೇಶದಿಂದ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆದರೆ, ಇಲ್ಲೊಂದು ಕಡು ಬಡ ಕುಟುಂಬ ಮಕ್ಕಳಿಗೆ ಒಂದು ಹೊತ್ತು ಊಟ ಹಾಕಲು ಪರದಾಡುತ್ತಿರುವ ಸಮಯದಲ್ಲಿ, ವಾಸ ಮಾಡಲು ಇದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದೆ. ಕಷ್ಟನೋ ಸುಖನೋ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ಮಹಿಳೆಯನ್ನು ಆ ಒಂದು ದಿನ ಏಕಾಏಕಿ ಬೀದಿಗೆ ನಿಲ್ಲುವಂತೆ ಮಾಡಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತಿರಾ ಈ ಸ್ಟೋರಿ ಒಮ್ಮೆ ಓದಿ….

ಹೌದು, ಹೀಗೆ ಸುಟ್ಟ ಮನೆ, ಮಾಸಿದ ಹಳೇ ಬಟ್ಟೆಯಲ್ಲೇ ನಿಂತಿರುವ ಮಕ್ಕಳು, ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಹಾಕಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವ ಮಹಿಳೆ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪಂಚಾಯತಿಯ ಭಕ್ತರಹಳ್ಳಿ ಗ್ರಾಮದಲ್ಲಿ. ಲಿಲಿತಾ ಬಾಯಿ ಎಂಬ ದಲಿತ ಮಹಿಳೆ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. 3 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಗಂಡ ತೀರಿಕೊಂಡಿದ್ದಾನೆ. ಇದ್ದ ಒಂದು‌ ಮನೆಯಲ್ಲಿ ಮಕ್ಕಳನ್ನು‌ ಸಾಕಿಕೊಂಡಿದ್ದಳು ಆ ಮಹಿಳೆ.

ಎಂದಿನಂತೆ ಬೆಳಗ್ಗೆ ಎದ್ದು ಕೂಲಿಗೆ ಹೋಗಿದ್ದಾಳೆ. ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಿನ್ನಲು ಶಾಲೆ ಬಳಿ ತೆರಳಿದ್ದರು. ಸಂಜೆ ಕೂಲಿ ಮುಗಿಸಿ ಮನೆಗೆ ಬಂದು ನೋಡಿದಾಗ, ಮನೆಯಲ್ಲಿ ಇದ್ದ ರಾಗಿ, ಅಕ್ಕಿ, ಅಡುಗೆ ಸಾಮಗ್ರಿಗಳ ಜೊತೆಯಲ್ಲಿ ಬೀರು, ಚೇರ್ ಎಲ್ಲವೂ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿ ಆಗಿವೆ.

ಬೆಂಕಿ ಸಂಪೂರ್ಣವಾಗಿ ಮನೆಯ ತುಂಬೆಲ್ಲಾ ಆವರಿಸಿದ ಕಾರಣ, ಎಂಚಿಗೆ ಹಾಕಿದ್ದ ಮರದ ದಿಮ್ಮಿಗಳೂ ಕೂಡ ಸಂಪೂರ್ಣವಾಗಿ ಬೆಂದುಹೋಗಿವೆ. ಅಲ್ಲದೆ ಸಂಪೂರ್ಣವಾಗಿ ಬಟ್ಟೆ ಇಡುವ ಪೆಟ್ಟಿಗೆ ನಾಶವಾದ ಹಿನ್ನೆಲೆ ಮಕ್ಕಳಿಗೆ ಇಟ್ಟುಕೊಳ್ಳಲು ಬಟ್ಟೇ ಕೂಡ ಇಲ್ಲದಂತೆ ಆಗಿದೆ. ಮಕ್ಕಳು ಹಳೇ ಬಟ್ಟೆಯಲ್ಲಿಯೇ ಕಾಲ ಹಾಕುವಂತೆ ಆಗಿದೆ. ಹರಿದ ಬಟ್ಟೆಯಲ್ಲಿರುವ ಮಕ್ಕಳಿಗೆ ಒಂದು ಜೊತೆ ಬಟ್ಟೆಯನ್ನೂ ಕೊಡಿಸಲು ಆಗದ ಸ್ಥಿತಿಯಲ್ಲಿ ತಾಯಿ ಇದ್ದಾಳೆ. ಅಡುಗೆ ಮಾಡಿಕೊಳ್ಳಲು ಯಾವ ಪಾತ್ರೆ ಸಮಾನುಗಳು‌ ಇಲ್ಲದೇ ಇರುವುದರಿಂದ ಗ್ರಾಮದಲ್ಲೇ ಇರುವ ಅನಾಥ ಆಶ್ರಮದಲ್ಲಿ ಎರಡು ಹೊತ್ತು ಊಟ ಮಾಡಿ ಮಲಗುವಂತಾಗಿದೆ. ಘಟನೆ ನಡೆದು ಹಲವು ದಿನಗಳು ಆದರೂ ಕೂಡ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಅಧಿಕಾರಿಗಳು, ಚುನಾವಣೆ ಮುಗಿಯಿತು ಎಂದು ರಾಜಕಾರಣಿಗಳು ಅಸಡ್ಡೆ ತೋರುತ್ತಿದ್ದಾರೆ.

ಒಟ್ಟಾರೆ, ಕೂಲಿ ನಾಲಿ ಮಾಡಿ ಮಕ್ಕಳಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದ ಮಹಿಳೆ ಈಗ ಒಂದು ಹೊತ್ತಿನ ಊಟಕ್ಕಾಗಿ ಅಲೆಯುತ್ತಿದ್ದಾಳೆ.‌ ಸೂರು ಇಲ್ಲದೆ ಬೀದಿಗೆ ಬಂದಿದ್ದಾರೆ. ಇನ್ನಾದರೂ ಯಾರಾದರೂ ಆ ಮಹಿಳೆಯ ಕಷ್ಟಕ್ಕೆ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *