ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ 9 ತಿಂಗಳ ತುಂಬು ಗರ್ಭಿಣಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ತಾಯಿ ಹೊಟ್ಟೆಯಿಂದ ಪ್ರಪಂಚಕ್ಕೆ ಬರುವ ಮುನ್ನವೇ ತಾಯಿ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.
ದೊಡ್ಡಬಳ್ಳಾಪುರದ ಬಸವೇಶ್ವರನಗರದ ನಿವಾಸಿ ಸುಷ್ಮಾ ಮಹೇಶ್ (30) ದುರಂತ ಸಾವಗೀಡಾದ ತುಂಬು ಗರ್ಭಿಣಿ.
ಆಕೆಗಿದು ಮೊದಲ ಮಗು, ಇನ್ನೇನು ಮನೆಗೆ ಹೊಸ ಅತಿಥಿಯ ಆಗಮನ ಆಗುತ್ತದೆ ಎಂದು ಕುಟುಂಬಸ್ಥರು ಖುಷಿ ಖುಷಿಯಾಗಿದ್ದರು. ಆದರೆ ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಎರಡು ಜೀವಗಳನ್ನ ಬಲಿ ಪಡೆದಿದೆ. ತಾಯಿ ಮತ್ತು ಮಗುವನ್ನ ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಆಸ್ಪತ್ರೆ ಅವರಣದಲ್ಲಿ ಮುಗಿಲು ಮುಟ್ಟಿದೆ.
ಮೃತ ಸುಷ್ಮಾಳನ್ನ ಬೆಂಗಳೂರಿನ ಮಹೇಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು, ಚೊಚ್ಚಲ ಹೆರಿಗೆಗಾಗಿ ಆಕೆ ತವರು ಮನೆಯಾದ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಯಲ್ಲಿ ರೆಗ್ಯೂಲರ್ ಚೆಕಪ್ ಮಾಡಿಸುತ್ತಿದ್ದರು. ಈಗಾಗಲೇ 9 ತಿಂಗಳು ತುಂಬಿದ ಹಿನ್ನಲೆ, ಹೆರಿಗೆ ನೋವು ಕಾಣಿಸಿಕೊಂಡ ಕಾರಣ ನಿನ್ನೆ ಸುಷ್ಮಾಳನ್ನ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಆಕೆಯನ್ನ ಪರೀಕ್ಷೆ ಮಾಡಿದ ವೈದ್ಯರು ಕೇವಲ ಒಂದು ಬಿಪಿ ಮಾತ್ರೆ ಕೊಟ್ಟು ಏನು ಆಗುವುದಿಲ್ಲ ಮನೆಗೆ ಹೋಗಿ ಎಂದು ಕಳಿಸಿದ್ದಾರೆ. ನನಗೆ ನೋವು ತಡೆಯಲಾಗುತ್ತಿಲ್ಲ ನನ್ನನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಬೇಡಿಕೊಂಡರು ವೈದ್ಯರು ಏನು ಆಗುವುದಿಲ್ಲ ನೋವು ತಡೆಯಬೇಕು ಎಂದು ಹೇಳಿ ಕಳಿಸಿದ್ದರು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂದು ಮುಂಜಾನೆ ಸಮಯದಲ್ಲಿ ನೋವು ತಾಳಲಾರದೆ ಸುಷ್ಮಾ ರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಾಗ ಯಾವುದೇ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮಗಳು ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಮೃತಳ ತಾಯಿ ಭಾಗ್ಯಮ್ಮ ಕಣ್ಣೀರು ಹಾಕಿದ್ದಾರೆ.
ಆಶಾ ಕಾರ್ಯಕರ್ತೆ ಪ್ರೇಮ ಕುಮಾರಿ ಮಾತನಾಡಿ, ನಿನ್ನೆ ಆಸ್ಪತ್ರೆಗೆ ಬಂದಾಗ ಬಿಪಿ ಹೆಚ್ಚಾಗಿದೆ ಎಂದು ವೈದ್ಯರು ಬಿಪಿ ಮಾತ್ರೆ ಕೊಟ್ಟು ಸುಷ್ಮಾರನ್ನು ಮನೆಗೆ ಕಳಿಸಿಕೊಟ್ಟಿದ್ದರು . ಇಂದು ಮುಂಜಾನೆ ಈ ಅವಘಡ ಸಂಭಾವಿಸಿದೆ ಎಂದಿದ್ದಾರೆ ಎಂದಿದ್ದಾರೆ.
ಸ್ಥಳೀಯರಾದ ಮುನಿಮಾರೇಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದೆ ಇರುವುದು ಇಂತಹ ಅನಾಹುತಕ್ಕೆ ಕಾರಣವಾಗಿದೆ, ಬಡವರು ಮಾತ್ರ ಸರ್ಕಾರಿ ಆಸ್ಪತ್ರೆ ಬರುತ್ತಾರೆ, ಬಡವರ ಜೀವಕ್ಕೆ ಬೆಲೆ ಇಲ್ಲವೇ, ಇಷ್ಟು ದೊಡ್ಡದಾದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಇಲ್ಲದೆ ಇರುವುದು ನೋವಿನ ಸಂಗತಿ, ತಾಯಿ ಮಗುವಿನ ಸಾವಿಗೆ ಆಸ್ಪತ್ರೆಯ ಅವ್ಯವಸ್ಥೆಯೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದರು.