ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಜನಪರವಾದ ಆಡಳಿತ ನಮ್ಮದಾಗಿದೆ. ಇದನ್ನು ಸಹಿಸದವರು ಹೇಳುವ ಮಾತುಗಳಿಗೆ ಜನ ಬೆಲೆ ಕೊಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಕೋಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಹೊರವಲಯದಲ್ಲಿರುವ ಮಾರಸಂದ್ರದ ಬಳಿ ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಬ್ಲಾಕ್ ವತಿಯಿಂದ ಶನಿವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಹಂತ ಹಂತವಾಗಿ ಮುಂದಿನ ಐದು ವರ್ಷಗಳ ಆಡಳಿತದಲ್ಲಿ ಈಡೇರಿಸಲಿದ್ದಾರೆ ಎಂದರು.
ಸುಳ್ಳು ಭರವಸೆಗಳನ್ನು ನೀಡುವ ಪಕ್ಷ ನಮ್ಮದಲ್ಲ, ನುಡಿದಂತೆ ನಡೆಯುವ ಪಕ್ಷ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಂತಹ ಕೆಲಸಗಳನ್ನು ರಾಜ್ಯದಲ್ಲಿ ಮಾಡಿ ತೋರಿಸಲಾಗುವುದು ಎಂದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಮಂಜುನಾಥ ಎಂ.ಅದ್ದೆ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಲಕ ಈ ನಾಡಿನಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ್ತಿರುವ ಹಾಗೂ ಅಂಬೇಡ್ಕರ್ ಅವರ ಸಂವಿಧಾನದಿಂದ ಮಾತ್ರ ಬಹುಜನರ ಏಳಿಗೆ ಸಾಧ್ಯವಾಗಲಿದೆ ಎನ್ನುವ ನಂಬಿಕೆ ಸತೀಶ್ಜಾರಕಿಹೊಳಿ ಅವರದ್ದು. ಈ ನಾಡಿನ ಉನ್ನತ ಹುದ್ದೆಯನ್ನು ನಿರ್ವಹಿಸುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವ ಪ್ರಮುಖರಾಗಿರುವ ಸತೀಶ್ ಜಾರಕಿಹೊಳಿ ಅವರು, ಇಡೀ ಮಾನ ಸಮುದಾಯ ಸಮಾನತೆಯಿಂದ ಬದುಕಬೇಕಿದೆ ಎನ್ನುವ ಆಶಯವನ್ನು ಹೊಂದಿದ್ದಾರೆ. ಸರ್ಕಾರದಲ್ಲಿ ಸದ್ದುಗದ್ದಲ ಇಲ್ಲದೆ ಕಾರ್ಯನಿರ್ವಹಿಸುತ್ತಿವುದು ಲೋಕೋಪಯೋಗಿ ಇಲಾಖೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸಚಿವ ಕೆ.ಎಚ್.ಮುನಿಯಪ್ಪ, ಹೆಸರಘಟ್ಟ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾಗರಾಜಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣ, ಪ್ರಕಾಶ್, ಮುಖಂಡರಾದ ಸತೀಶ್ಸಾದೇನಹಳ್ಳಿ, ರಮೇಶ್, ರಾಜಾನುಕುಂಟೆ ಚಂದ್ರಶೇಖರ್, ಇಟ್ಟಗಲ್ಲಪುರ ಮುನಿಕೃಷ್ಣ, ವಿರೂಪಾಕ್ಷ, ಚಂದ್ರಶೇಖರ್ ಇದ್ದರು.