ಸುಮಾರು ಆರು ತಿಂಗಳ ಹಿಂದೆ(20.12.2023) ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಂದು ಕಳುವಾಗಿದ್ದ ಕರಿಮಣಿ ಸರವನ್ನು ವೃದ್ಧೆಗೆ ಮರಳಿಸಿರುವ ಘಟನೆ ನಡೆದಿದೆ.
ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ ಎಂಬ ವೃದ್ಧೆಯ ಕೊರಳಲ್ಲಿದ್ದ 10 ಗ್ರಾಂ ತೂಕದ ಕರಿಮಣಿ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಕದ್ದು ಎಸ್ಕೇಪ್ ಆಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೃದ್ಧೆ ದೂರು ದಾಖಲು ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದ ತಂಡ, ಸೂಕ್ತ ತನಿಖೆ ನಡೆಸಿ ಕಳ್ಳರ ಜಾಡು ಪತ್ತೆಹಚ್ಚಿ ಕದ್ದ ಕರಿಮಣಿ ಸರವನ್ನು ವಶಪಡಿಸಿಕೊಂಡು, ವೃದ್ಧೆಗೆ ಒಪ್ಪಿಸಿದ್ದಾರೆ.
ಆರು ತಿಂಗಳು ಬಳಿಕ ತನ್ನ ಕರಿಮಣಿಸರ ಪಡೆದ ನಂತರ ವೃದ್ಧೆಯ ಮುಖದಲ್ಲಿ ಮಂದಹಾಸ ಮೂಡಿತ್ತು. ಪೊಲೀಸರ ಕಾರ್ಯವೈಖರಿಗೆ ವೃದ್ಧೆ ತನ್ನ ಕೃತಜ್ಞತೆಗಳನ್ನು ತಿಳಿಸಿದರು.
ಘಟನೆ ವಿವರ:
20-12-2023ರಂದು ಬೆಳಗ್ಗೆ ಎಂದಿನಂತೆ ಹಸುವನ್ನು ಮೇಯಿಸಲು ವೃದ್ಧೆ ತಮ್ಮ ಜಮೀನಿನ ಬಳಿ ಬಂದಿರುತ್ತಾರೆ. ಒಂಟಿಯಾಗಿ ಹಸುವನ್ನು ಮೇಯಿಸುತ್ತಿದ್ದ ವೃದ್ಧೆಯನ್ನು ಗಮನಿಸಿದ ಇಬ್ಬರು ಕಳ್ಳರು, ಅದರಲ್ಲಿ ಒಬ್ಬ ಮಧ್ಯಾಹ್ನ 3ಗಂಟೆ ಸುಮಾರಿಗೆ ಅಜ್ಜಿ ಕುಳಿತ್ತಿದ್ದ ಸ್ಥಳಕ್ಕೆ ಬರುತ್ತಾನೆ. ಅಜ್ಜಿ ಬಳಿ ಬಂದಾತ ಇಲ್ಲಿ ಕಳ್ಳರು ಹೆಚ್ಚಾಗಿ ಓಡಾಡುತ್ತಾರೆ. ಕೊರಳಲ್ಲಿ ಚಿನ್ನದ ಗುಂಡುಗಳಿರುವ ಕರಿಮಣಿ ಸರವನ್ನು ಹಾಕಿಕೊಂಡಿದ್ದೀರಾ, ಅದನ್ನು ಬಿಚ್ಚಿಕೊಡಿ ಬಟ್ಟೆಯಲ್ಲಿ ಸುತ್ತಿಕೊಡುತ್ತೇವೆ ಎಂದು ಹೇಳಿ ಕತ್ತಲ್ಲಿದ್ದ ಚಿನ್ನದ ಗುಂಡುಗಳೊಂದಿಗೆ ಪೋಣಿಸಿರುವ ಮಣಿ ಇರುವ ಸರವನ್ನು ಬಿಚ್ಚಿಸಿಕೊಂಡು ಅಜ್ಜಿಗೆ ಅರಿವಿಲ್ಲದಂತೆ ಕಳುವು ಮಾಡಿ ಪರಾರಿಯಾಗಿದ್ದನು.
ಸುಮಾರು 50ಸಾವಿರ ಬೆಲೆಬಾಳುವ ಮಣಿಗಳೊಂದಿಗೆ ಪೋಣಿಸಿರುವ 34 ಚಿನ್ನದ ಗುಂಡುಗಳು ಸುಮಾರು 10 ಗ್ರಾಂ ತೂಕದ ಕರಿಮಣಿ ಸರವನ್ನು ಕದ್ದೊಯ್ದಿದ್ದರು. ಈ ಕುರಿತು 21-13-2023ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.