ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್.ಗವಾಯಿ ನೇಮಕ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು‌ ಮೇ 13ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು 53ನೇ ಸಿಜೆಐ ಆಗಿ 6 ತಿಂಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಮತ್ತು ನವೆಂಬರ್ 23, 2025ರಂದು ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ಗವಾಯಿ ಅವರು ಮೇ 29, 2019ರಂದು ಭಾರತದ ಸುಪ್ರೀಂ ಕೋರ್ಟ್​ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು ನವೆಂಬರ್ 2003ರಲ್ಲಿ ಬಾಂಬೆ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಮತ್ತು ನವೆಂಬರ್ 2005ರಲ್ಲಿ ಖಾಯಂ ನ್ಯಾಯಾಧೀಶರಾದರು.

ನ್ಯಾಯಾಧೀಶರಾಗುವ ಮುನ್ನ ಅವರು ಸಾಂವಿಧಾನಿಕ ಕಾನೂನು ಮತ್ತು ಆಡಳಿತ ಕಾನೂನುಗಳಲ್ಲಿ ವಕೀಲಿಕೆ ಮಾಡಿದರು. ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಆಗಸ್ಟ್ 1992ರಲ್ಲಿ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲರಾಗಿ ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಜುಲೈ 1993 ರವರೆಗೆ ಈ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಜನವರಿ 17, 2000ರಂದು ನಾಗ್ಪುರ ಪೀಠದ ಸರ್ಕಾರಿ ವಕೀಲರಾಗಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಅವರು ನೇಮಕಗೊಂಡರು.

Leave a Reply

Your email address will not be published. Required fields are marked *