ಸುಧಾರಿತ ಹಿತ್ತಲ ಕೋಳಿ (ಸ್ವರ್ಣಧಾರ) ಸಾಕಾಣಿಕೆ

ಕೃಷಿಯು ನಾಡಿನ ಗ್ರಾಮೀಣ ಜನತೆಯ ಮುಖ್ಯ ಜೀವನ ಮಾರ್ಗವಾಗಿರುವಂತೆಯೇ, ಕೃಷಿ ಪೂರಕ ಚಟುವಟಿಕೆಯಾದ ಕುಕ್ಕಟ ಪಾಲನೆಯು ದೇಶದ ಆಹಾರೋತ್ಪಾದನೆ ಸಾಮರ್ಥ್ಯದ ದೃಷ್ಟಿಯಿಂದ ಅತೀ ಮುಖ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆಯು ಒಂದು ಪ್ರಮುಖ ಉದ್ದಿಮೆಯಾಗಿ ಬೆಳೆಯುತ್ತಿದ್ದರೂ ಸಹ, ದೇಶದಲ್ಲಿ ಮಾಂಸ ಮತ್ತು ಮೊಟ್ಟೆ ಲಭ್ಯತೆಯಲ್ಲಿ ಸಾಕಷ್ಟು ಕೊರತೆಯಿದ್ದು, ಅದರ ಸುಧಾರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಹಳ್ಳಿಗಾಡು ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮೀಣ ರೈತರ ಅಭಿವೃದ್ಧಿಗಾಗಿ ಕೃಷಿ ಹಾಗೂ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಶ್ರಮಿಸುತ್ತಿವೆ.

ಕುಕ್ಕಟ ಪಾಲನೆಯಲ್ಲಿ ಗ್ರಾಮೀಣ ಜನತೆಗೆ, ಬಡತನ ರೇಖೆಗಿಂತ ಕೆಳಗಿರುವ ರೈತರ ಬದುಕು ಹಸನಾಗಲೆಂಬ ಸದುದ್ದೇಶದಿಂದ “ಗಿರಿರಾಜ” ಎಂಬ ಕೋಳಿ ತಳಿಗಳನ್ನು ಪರಿಚಯಿಸಿರುತ್ತಾರೆ. ಇದು ಒಂದು ಉತ್ತಮ ಮಾಂಸ ಉತ್ಪಾದನೆಯ ತಳಿಯಾಗಿದ್ದು, ಗ್ರಾಮೀಣ ಜನತೆಯ ಅಚ್ಚುಮೆಚ್ಚಿನ ಪ್ರಬೇಧವಾಗಿದೆ.

ಗಿರಿರಾಜ ತಳಿಯು ಕರ್ನಾಟಕ ಹಾಗೂ ಭಾರತ ದೇಶದಲ್ಲದೆ, ವಿದೇಶಗಳಾದ ಶ್ರೀಲಂಕಾ ಮತ್ತು ನೇಪಾಳಗಳಲ್ಲೂ ಹೆಚ್ಚು ಪ್ರಚಲಿತವಾಗಿದೆ. ಇದೀಗ “ಸ್ವರ್ಣಧಾರ” ಎಂಬ ಕೋಳಿ ತಳಿಯನ್ನು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿಜ್ಞಾನಿಗಳು ಬಿಡುಗಡೆಗೊಳಿಸಿದ್ದಾರೆ. ಇದನ್ನು ಗ್ರಾಮೀಣ ಜನತೆಯು ಹೆಚ್ಚು ಮೊಟ್ಟೆ ಉತ್ಪಾದಿಸುವ ಕೋಳಿ ತಳಿಯನ್ನು ಇಷ್ಟಪಡುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಕೋಳಿ ತಳಿಯನ್ನು ಅಭಿವೃದ್ಧಿಪಡಿಸಿರುತ್ತಾರೆ.

ಈ ತಳಿಯು ಗಿರಿರಾಜ ಕೋಳಿಗಿಂತ ಹೆಚ್ಚು ಮೊಟ್ಟೆ ಉತ್ಪಾದನಾಶಕ್ತಿ ಹೊಂದಿರುತ್ತದೆ. ಈ ತಳಿಗಳು ನಾಟಿ ಕೋಳಿಯನ್ನು ಹೋಲುವ ರೆಕ್ಕೆ ಪುಕ್ಕಗಳನ್ನು ಹೊಂದಿದ್ದು, ಯಾವುದೇ ಭೌಗೋಳಿಕ ವಾತಾವರಣಕ್ಕೆ ಹೊಂದಿಕೊಂಡು ಹಿತ್ತಲಲ್ಲಿ ಬದುಕಬಲ್ಲವು. ಇವುಗಳಿಗೆ ಯಾವುದೇ ರೀತಿಯ ಆಧುನಿಕ ವಸತಿ, ಸಮತೋಲನ ಆಹಾರ, ಹೆಚ್ಚಿನ ಆರೋಗ್ಯ ರಕ್ಷಣಾ ಕ್ರಮಗಳ ಅವಶ್ಯಕತೆಯಿರುವುದಿಲ್ಲ.

ಸಾಕುವ ಸರಳ ವಿಧಾನಗಳು

1.ಒಂದು ದಿನದ ವಯಸ್ಸಿನ ಕೋಳಿ ಮರಿಗಳನ್ನು ಪಡೆದು ಸಾಕಣೆ ಮಾಡುವವರು ಮೂರು ವಾರದ ವಯಸ್ಸಿನವರೆಗೂ ಬಿದಿರಿನ ಬುಟ್ಟಿ ಒಳಗೆ ವಿದ್ಯುತ್‌ ದೀಪವನ್ನು ಜೋಡಿಸಿ ಕೃತಕ ಕಾವು ಕೊಡಬೇಕಾಗುತ್ತದೆ.

2. ಕಾಗೆ, ಹದ್ದು, ಬೆಕ್ಕು ಮತ್ತು ನಾಯಿಗಳಿಂದ ಕೋಳಿಮರಿಗಳನ್ನು ರಕ್ಷಿಸಲು, ಸುಮಾರು ಅರ್ಧ ಕಿ.ಗ್ರಾಂ. ನಷ್ಟು ದೇಹದ ತೂಕ ಹೊಂದುವವರೆಗೂ ಮನೆಯಲ್ಲಿ ಪೋಷಿಸಿ ನಂತರ ನಾಟಿ ಕೋಳಿಗಳಂತೆ ಹೊರಗಡೆ ಮೇಯಲು ಬಿಡಬಹುದು.

3.ಕೊಕ್ಕರೆ ರೋಗದಿಂದ ರಕ್ಷಿಸಲು 8ನೇ ದಿನ, 6ನೇ ವಾರ ಮತ್ತು 8ನೇ ವಾರದ ವಯಸ್ಸಿನಲ್ಲಿ ಕೊಕ್ಕರೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.

4.ಸುಧಾರಿತ ತಳಿಯ ಹೆಂಟೆಗಳು ಬೆಳೆದು 5 ತಿಂಗಳ ವಯಸ್ಸಿನವಾದಾಗ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಪ್ರತಿ 6 ರಿಂದ 8 ಹೆಂಟೆಗಳಿಗೆ ಒಂದರಂತೆ ಹುಂಜ ಅನುಪಾತ ಇರುವಂತೆ ಎಚ್ಚರವಹಿಸಬೇಕು. ಸ್ಥಳೀಯ ನಾಟಿ ಹುಂಜಗಳನ್ನು ಸ್ವರ್ಣಧಾರ ಹೆಂಟೆಗಳ ಜೊತೆಗಿರಿಸದೇ ಅವುಗಳನ್ನೆಲ್ಲಾ ಮಾಂಸಕ್ಕಾಗಿ ವಿಲೇವಾರಿ ಮಾಡಬೇಕು.

5. ಸುಧಾರಿತ ಹೆಂಟೆಗಳು ತಮ್ಮಷ್ಟಕ್ಕೆ ತಾವೇ ಕಾವಿಗೆ ಕುಳಿತು ಮರಿ ಮಾಡಿಸುವ ಗುಣ ಹೊಂದಿರುವುದಿಲ್ಲ. ಆದುದರಿಂದ ಒಂದು ನಾಟಿ ಕಾವು ಕೋಳಿಯಿಂದ ಸುಮಾರು 8-10 ತತ್ತಿಗಳನ್ನಿಟ್ಟು ಕಾವು ಕೊಟ್ಟು ಮರಿ ಮಾಡಿಸಬಹುದು.

6. ಸ್ಥಳೀಯವಾಗಿ ದೊರಕುವ ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆ, ಗೋದಿ, ಅಕ್ಕಿ ನುಚ್ಚು ಹಾಗೂ ಇತರೆ ಆಹಾರ ಧಾನ್ಯಗಳನ್ನು ಪ್ರತಿ ಕೋಳಿಗೆ 30-50 ಗ್ರಾಂ. ನಂತೆ ಪ್ರತಿ ನಿತ್ಯ ಒದಗಿಸುವುದರಿಂದ ಅವುಗಳ ಮಾಂಸ ಮತ್ತು ತತ್ತಿ ಉತ್ಪಾದನೆ ಅಧಿಕಗೊಳಿಸಬಹುದು.

ಸುಧಾರಿತ ತಳಿಗಳಲ್ಲಿ ತತ್ತಿ ಮತ್ತು ಮಾಂಸ ಉತ್ಪಾದನೆಯ ಸಾಮರ್ಥ್ಯವು ನಾಟಿ ಕೋಳಿಗಳಿಗಿಂತ ಸುಮಾರು 2-3 ಪಟ್ಟು ಅಧಿಕವಾಗಿರುತ್ತದೆ. ನಾಟಿ ಕೋಳಿಗಳಂತೆ ಮಾಂಸವು ರುಚಿಕರ ಹಾಗೂ ಸುಮಧುರವಾಗಿರುತ್ತದೆ. ಕೋಳಿ ಮಾಂಸ ಮತ್ತು ತತ್ತಿಗಳು ಒಳ್ಳೆಯ ಸಸಾರಜನಕಯುಕ್ತ ಪೌಷ್ಠಿಕ ಆಹಾರ, ಮೊಟ್ಟೆ ಉತ್ಪಾದನೆ ದೈನಂದಿನ ಕ್ರಿಯೆಯಾದುದರಿಂದ ರೈತ ಕುಟುಂಬದ ಪ್ರತಿ ದಿನದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಗಿರಿರಾಜ/ಸ್ವರ್ಣಧಾರ ತಳಿಗಳು ಅನುಕೂಲವಾಗುತ್ತವೆ. ಗ್ರಾಮೀಣ ಮಕ್ಕಳ ಸಸಾರಜನಕದ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ದಿನದ ವೆಚ್ಚಕ್ಕೆ ಸ್ವಲ್ಪ ಹಣ ಒದಗಿಸುವಲ್ಲಿ ಈ ತಳಿಗಳು ಸಹಾಯಕಾರಿಯಾಗಿವೆ.

20 ಸ್ವರ್ಣಧಾರ ಕೋಳಿ ಮರಿಗಳ ಸಾಕಣೆಯಿಂದ ಬರುವ ಆದಾಯದ ವಿವರಣೆ ಈ ಕೆಳಕಂಡಂತಿದೆ.

ಒಂದು ದಿನದ ಮರಿಗೆ ರೂ. 15 ರೂ. ರಂತೆ 20 ಮರಿಗಳಿಗೆ ರೂ.300/- ಗಳು.

ಆಹಾರ : ಹೊಲದಲ್ಲಿ / ಹಿತ್ತಲಲ್ಲಿದೊರೆಯುವ ಜೋಳ, ರಾಗಿ, ಅಕ್ಕಿ ನುಚ್ಚು ಹಾಗೂ ಅಡುಗೆ ಮನೆಯ ತ್ಯಾಜ್ಯ ಪದಾರ್ಥಗಳು.

ಮೊಟ್ಟೆಯಿಡಲು 25-26 ವಾರಗಳ ನಂತರ ಶೇ. 80 ರ ಉಳಿಕೆ ಪ್ರಮಾಣದಂತೆ 16 ಕೋಳಿಗಳು. ಇದರಲ್ಲಿ ಅರ್ಧದಷ್ಟು ಅಂದರೆ 8 ಹೆಣ್ಣು, ಉಳಿದ ಅರ್ಧದಷ್ಟು ಅಂದರೆ 8ಗಂಡು. 2 ಗಂಡು ಕೋಳಿಗಳನ್ನು ಬಿತ್ತನೆಗೆ ಉಳಿಸಿಕೊಂಡು ಉಳಿದ 6 ಕೋಳಿಗಳನ್ನು ಸರಾಸರಿ ರೂ. 300/- ದರದಲ್ಲಿ ಮಾರಾಟ ಮಾಡಿದಲ್ಲಿ ಆದಾಯ ರೂ. 1,800/- ಗಳು

8 ಹೆಣ್ಣು ಕೋಳಿಗಳಿಂದ 75 ವಾರಗಳಲ್ಲಿ ಪ್ರತಿಯೊಂದು ಕೋಳಿಗೆ ರೂ. 200/- ರಂತೆ ಒಟ್ಟು 1600 ತತ್ತಿಗಳು ದೊರೆಯುತ್ತವೆ. ಒಂದು ತತ್ತಿಗೆ ಕನಿಷ್ಠ ರೂ. 3/- ರಂತೆ ಒಟ್ಟು ಆದಾಯ ರೂ. 4,800/- ಗಳು.

ಕೊನೆಯಲ್ಲಿ 8 ಹೆಣ್ಣು ಕೋಳಿಗಳನ್ನ ರೂ. 250/-ಗಳಂತೆ ಹಾಗೂ 2 ಗಂಡು ಕೋಳಿಗಳನ್ನು ರೂ. 300/- ಗಳಂತೆ ವಿಲೇವಾರಿ ಮಾಡಿದಲ್ಲಿ ಒಟ್ಟು ಆದಾಯ ರೂ. 2,600/- ಗಳು.

75 ವಾರಗಳಲ್ಲಿ 20 ಸ್ವರ್ಣಧಾರ ಮರಿಗಳಿಂದ ಬರುವ ಒಟ್ಟು ನಿವ್ವಳ ಲಾಭ (1800+4800+2600+300) = ರೂ. 9.500/- ಗಳು. ಇದಲ್ಲದೇ, ಕೋಳಿಗಳ ಗೊಬ್ಬರದಿಂದ ಹೊಲದ ಫಲವತ್ತತೆ ಹೆಚ್ಚುತ್ತದೆ.

ಗಿರಿರಾಜ ಮತ್ತು ಸ್ವರ್ಣಧಾರ ಕೋಳಿಗಳನ್ನು ಸಾಕಿ ಹೆಚ್ಚು ಮೊಟ್ಟೆ ಮತ್ತು ಮಾಂಸ ಉತ್ಪಾದನೆಯನ್ನು ಮಾಡಿ ಆರ್ಥಿಕ ಮಟ್ಟ ಸುಧಾರಿಸಬಹುದು ಹಾಗೂ ಬಡತನ ರೇಖೆಗಿಂತ ಕೆಳಗಿರುವ ರೈತರು ತಮ್ಮ ಆರೋಗ್ಯವನ್ನು ಸುಧಾರಿಸಬಹುದು.

ಗಿರಿರಾಜ ಮತ್ತು ಸ್ವರ್ಣಧಾರ ಕೋಳಿಮರಿಗಳನ್ನು ಸಾಕಲಿಚ್ಚಿಸುವವರು ಕುಕ್ಕಟ ವಿಜ್ಞಾನ ವಿಭಾಗ, ಪಶು ವೈದ್ಯಕೀಯ ಕಾಲೇಜು, ಹೆಬ್ಬಾಳ, ಬೆಂಗಳೂರು-560 024 ಇವರಿಂದ ಮುಂಗಡವಾಗಿ ಕಾಯ್ದಿರಿಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *