ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಜಿಎಸ್ ಎಲ್ ವಿಯ ಉಪಗ್ರಹ ಉಡಾವಣಾ ವಾಹನವು ತನ್ನ 15ನೇ ಹಾರಾಟದಲ್ಲಿ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ NVS-01ನ್ನು ಇಂದು ಬೆಳಿಗ್ಗೆ 10.42ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ರಾಕೆಟ್ ಉಡಾವಣೆಯಾದ 20 ನಿಮಿಷಗಳ ನಂತರ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ಸೇರಿಸಿದೆ ಎಂದು ಇಸ್ರೋ ಮೂಲಗಳಿಂದ ತಿಳಿದುಬಂದಿದೆ.
ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಪಗ್ರಹ ಉಡಾವಣೆ ಮಾಡಲಾಗಿದೆ.
ಉಪಗ್ರಹ ಕಕ್ಷೆ ಸೇರುತ್ತಿದ್ದಂತೆ ವಿಜ್ಞಾನಿಗಳ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಪರಸ್ಪರ ಹಸ್ತಲಾಘವ ಮಾಡಿ ಶುಭ ಕೋರಿದರು. ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇಡೀ ತಂಡವನ್ನು ಅಭಿನಂದಿಸಿದ್ದಾರೆ.