ಚಪ್ಪರ ಶಾಸ್ತ್ರದ ಊಟದಲ್ಲಿ ಸಿಹಿತಿಂಡಿ ನೀಡದ್ದಕ್ಕೆ ಮದುವೆ ರದ್ದು..!

ತಾಳಿ ಕಟ್ಟುವ ಶುಭ ವೇಳೆಯಲ್ಲಿ ಏನಾದರೊಂದು ಅನೀರಿಕ್ಷಿತ ತಕರಾರು ಉದ್ಭವಿಸಿ ಕೆಲ ವಿವಾಹಗಳು ರದ್ದಾಗಿರುವ ನಿದರ್ಶನಗಳು ನಡೆದಿವೆ. ಅದೇ ರೀತಿ ಇಲ್ಲೊಂದು ಮದುವೆ ರದ್ದಾಗಿದೆ. ಆದರೆ ಇದಕ್ಕೆ ಕಾರಣವಾಗಿದ್ದು ಯಾವುದೋ ಬಲವಾದ ಕಾರಣವಲ್ಲ. ಹಾಗಾದರೆ ಏನಿದು ಕಾರಣ…?

ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಕೊಡಗಿನ ಸೋಮವಾರಪೇಟೆಯ ಕಲ್ಯಾಣಮಂಟಪವೊಂದರಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೋರ್ವನೊಂದಿಗೆ ನಿಶ್ಚಯವಾಗಿದ್ದು, ಮೇ 5ರಂದು ಇಲ್ಲಿನ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ವಿವಾಹ ನಿಗದಿಯಾಗಿತ್ತು.

ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದು, ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಮದುವೆಯೇ ಬೇಡ ಎಂದು ವರ ಉಂಗುರವನ್ನೇ ಕಳಚಿಕೊಟ್ಟ.

ರವಿವಾರ ಬೆಳಗ್ಗೆ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತು. ಶನಿವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ, ರವಿವಾರ ಬೆಳಗ್ಗೆ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದ.

ಆದರೆ ದಿಢೀರ್‌ ಘಟನಾವಳಿಯಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು. ಹೀಗಾಗಿ ಪೂರ್ವ ನಿಗದಿತ ವಿವಾಹ ಕಾರ್ಯ ಸಿಹಿ ತಿಂಡಿ ವಿಚಾರವಾಗಿ ಮುರಿದು ಬಿತ್ತು.

ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

Leave a Reply

Your email address will not be published. Required fields are marked *