ಸಿರಿಧಾನ್ಯಗಳು ಮನುಕುಲಕ್ಕೆ ತಿಳಿದಿರುವ ಅತ್ಯಂತ ಪುರಾತನ ಆಹಾರವಾಗಿದ್ದು ಕಡಿಮೆ ನೀರು ಉಪಯೋಗಿಸಿ, ರಾಸಾಯನಿಕ ಗೊಬ್ಬರವಿಲ್ಲದೆ ಬರಡು ಭೂಮಿಯಲ್ಲೂ ಸಹಜವಾಗಿ ಬೆಳೆಯುವ ಮತ್ತು ಬೇಗ ಕಟಾವಿಗೆ ಬರುವ ಬೆಳೆಗಳಾಗಿವೆ. ಆದ್ದರಿಂದ ಇವುಗಳನ್ನು ‘ಬರಗಾಲದ ಮಿತ್ರ’ ಎಂದೂ ಸಹ ಕರೆಯಲಾಗುತ್ತದೆ. ಭಾರತವು ಸೇರಿದಂತೆ ವಿಶ್ವದ ಅರೆ ಒಣ ಪ್ರದೇಶದಲ್ಲಿ ಸಿರಿ ಧಾನ್ಯಗಳನ್ನು ಆಹಾರ ಮತ್ತು ಮೇವು ಬೆಳೆಗಳಾಗಿ ಬೆಳೆಯಲಾಗುತ್ತಿದ್ದು, ಶತಕೋಟಿಗೂ ಹೆಚ್ಚಿನ ಜನರಿಗೆ ಆಹಾರದ ಶಕ್ತಿ ಮತ್ತು ಸಾರಜನಕದ ಮೂಲವಾಗಿದೆ. ಪ್ರಪಂಚದಾದ್ಯಂತ ಇವುಗಳ ಮಹತ್ವ ತಿಳಿಸಲು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ.
ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಪ್ರಮುಖವಾಗಿ ಧಾನ್ಯಗಳನ್ನು ಮೂಲ ಬೀಜ, ಪಿಷ್ಠವಿರುವ ಎಂಡೋಸ್ಪರ್ಮ್ ಮತ್ತು ರಕ್ಷಣಾ ಪದರ ಎಂದು ಮೂರು ಘಟಕಗಳಾಗಿ ಪರಿವರ್ತಿಸಲಾಗುತ್ತದೆ. ಸಿರಿಧಾನ್ಯಗಳ ಸಾಂಪ್ರದಾಯಿಕ ಸಂಸ್ಕರಣೆ ವಿಧಾನಗಳು ತುಂಬಾ ಪ್ರಯಾಸಕರ ಮತ್ತು ಹಸ್ತ ಚಾಲಿತವಾಗಿದ್ದು ಮಾನವ ಶ್ರಮ ಹಾಗೂ ಖರ್ಚು ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಕೊಡುತ್ತವೆ.
ಸಿರಿಧಾನ್ಯಗಳ ಸಂಸ್ಕರಣಾ ಹಂತಗಳು
1. ಪ್ರಾಥಮಿಕ ಹಂತ
2. ದ್ವಿತೀಯ ಹಂತ
1. ಪ್ರಾಥಮಿಕ ಹಂತದ ಸಂಸ್ಕರಣೆ
ಧಾನ್ಯಗಳಲ್ಲಿರುವ ಕಲ್ಮಶ, ಕಸ, ಕಡ್ಡಿ ಇತರೆ ಕಳೆ ಬೀಜ ಮತ್ತು ಕಾಳಿನ ಹೊಟ್ಟು ತೆಗೆದು ಹಾಕುವ ಪ್ರಕ್ರಿಯೆಯನ್ನು ಪ್ರಾಥಮಿಕ ಸಂಸ್ಕರಣೆ ಎಂದು ಕರೆಯಲಾಗುತ್ತದೆ. ಹೀಗೆ ಸ್ವಚ್ಛಗೊಳಿದ ಧಾನ್ಯಗಳು ದ್ವಿತೀಯ ಸಂಸ್ಕರಣೆ ಮಾಡಲು ಅನುಕೂಲಕರವಾಗಿರುತ್ತವೆ. ಪ್ರಾಥಮಿಕ ಸಂಸ್ಕರಣೆಯಲ್ಲಿರುವ ಕಾರ್ಯ ವಿಧಾನಗಳೆಂದರೆ ವರ್ಗೀಕರಣ (ಗ್ರೇಡಿಂಗ್), ಕಲ್ಲು ತೆಗೆಯುವುದು (ಡಿ-ಸ್ಟೋನಿಂಗ್), ಹೊಟ್ಟು ತೆಗೆಯುವುದು (ಡಿ-ಹಲ್ಲಿಂಗ್).
2. ದ್ವಿತೀಯ ಹಂತದ ಸಂಸ್ಕರಣೆ
ಪ್ರಾಥಮಿಕ ಸಂಸ್ಕರಣೆ ಮಾಡಿದ ಕಚ್ಛಾ ವಸ್ತುಗಳನ್ನು ತಿನ್ನಲು ಸಿದ್ಧ ವಸ್ತುಗಳನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ದ್ವಿತೀಯ ಸಂಸ್ಕರಣೆ ಎನ್ನುತ್ತಾರೆ. ಉದಾಹರಣೆಗೆ ಅಡುಗೆ ಮಾಡಲು ತಯಾರಿರುವ ಉತ್ಪನ್ನಗಳು ರೆಡಿ ಟು ಕಿಕ್ ಮತ್ತು ತಿನ್ನಲು ಸಿದ್ಧವಿರುವ ಪದಾರ್ಥಗಳು.
ಸಿರಿಧಾನ್ಯಗಳು ಪೋಷಕಾಂಶದಲ್ಲಿ ಶ್ರೇಷ್ಠವಾಗಿದ್ದರೂ ಸಹ ಅದರ ಬಳಕೆ ಮಾರುಕಟ್ಟೆಯಲ್ಲಿ ಕ್ರಮೇಣ ಇಳಿಮುಖವಾಗಿದೆ. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ನಗರ ಪ್ರದೇಶದಲ್ಲಿ ಅವುಗಳ ಬಳಕೆಯನ್ನು ಹೆಚ್ಚಿಸಬಹುದು. ಪ್ರಾಥಮಿಕವಾಗಿ ಮೌಲ್ಯವರ್ಧನೆಯು ಸಿರಿಧಾನ್ಯಗಳ ಬೇಡಿಕೆ ಮತ್ತು ಬಳಕೆಯನ್ನು ಹೆಚ್ಚಿಸುತ್ತದೆ. ಕಿರಿಧಾನ್ಯಗಳನ್ನು ಸಾಂಪ್ರದಾಯಿಕ ಉತ್ಪನ್ನಗಳು, ಪಾಸ್ತಾ ಉತ್ಪನ್ನಗಳು, ಬೇಕರಿ ಉತ್ಪನ್ನಗಳು ಮತ್ತು ತ್ವರಿತ ಆಹಾರ ಮಿಶ್ರಣಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ.