ಕೊಲಂಬೊದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ನ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರಿತ್ ಬುಮ್ರಾ ಅವರ ಕೈಚಳಕದಿಂದ ಭಾರತ ಸುಲಭ ಗೆಲುವು ಸಾಧಿಸುವ ಮೂಲಕ ಏಷ್ಯಾ ಕ್ರಿಕೆಟ್ ಗೆ ಭಾರತವೇ ಬಾಸ್ ಎಂದು ಸಾರಿದರು.
ಟೂರ್ನಿ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಎರಡೂ ತಂಡಗಳಿಗೆ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹೋರಾಟ ಮಾಡಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿತ್ತು.
ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬ್ಯಾಟಿಂಗ್ ಆಯ್ದುಕೊಂಡರು, ಆದರೆ ಅವರ ನಿರ್ಧಾರವನ್ನು ಬ್ಯಾಟಿಂಗ್ ಪಡೆ ಸಮರ್ಥಿಸುವಲ್ಲಿ ವಿಫಲವಾಗುವ ಮೂಲಕ ಪೆವಿಲಿಯನ್ ಗೆ ಪರೇಡ್ ನಡೆಸಿದರು.
ಭಾರತದ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ 21 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಭಾರತದ ಪರವಾಗಿ ಕಡಿಮೆ ರನ್ ನೀಡಿ 6 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿದರು.
ಈ ಮೊದಲು ಸ್ಟುವರ್ಟ್ ಬಿನ್ನಿ, ಅನಿಲ್ ಕುಂಬ್ಳೆ ಹಾಗೂ ಜಸ್ಪ್ರಿತ್ ಬುಮ್ರಾ ಈ ಸಾಧನೆ ಮಾಡಿದ್ದರು. ಇದೀಗ ಇವರ ಪೆಟ್ಟಿಗೆ ಸಿರಾಜ್ ಕೂಡ ಸೇರ್ಪಡೆಯಾದರು. ಹಾರ್ದಿಕ್ ಪಾಂಡ್ಯ 3 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ಪರವಾಗಿ ಕುಶಾಲ್ ಮೆಂಡಿಸ್ (17) ಹಾಗೂ ದುಶಾನ್ ಹೇಮಂತ್ (13) ರನ್ ಗಳಿಸಿದರೆ ಉಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ಮೊತ್ತ ದಾಟಲಿಲ್ಲ ಹಾಗೂ ನಾಲ್ವರು ಬ್ಯಾಟ್ಸ್ಮನ್ ಸೊನ್ನೆ ಸುತ್ತಿದರು.
50 ರನ್ ಗುರಿ ಬೆನ್ನತ್ತಿದ್ದ ಭಾರತ ತಂಡದ ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ (27) ಹಾಗೂ ಇಶಾನ್ ಕಿಶನ್ (23)ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ವಿಕೆಟ್ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿದರು.
ಭಾರತ ತಂಡ 8ನೇ ಬಾರಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ 2ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಬೆಂಕಿ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.