ಸಿಕ್ಕಿಂನಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ತತ್ತರಿಸಿ ಹೋಗುತ್ತಿರುವ ಜನತೆ. ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲೆ ಮೇಘ ಸ್ಫೋಟ ಉಂಟಾಗಿದ್ದು, ಸರೋವರದ ನೀರು ಉಕ್ಕಿ ಹರಿದು ತೀಸ್ತಾ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ತೀಸ್ತಾ ನದಿ ಉಕ್ಕಿ ಹರಿಯುತ್ತಿರುವ ಭಯಾನಕ ದೃಶ್ಯಗಳ ವಿಡಿಯೋಗಳನ್ನು ಕೆಲವು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ತೀಸ್ತಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಂಗ್ತಾಮ್ ಕಾಲು ಸೇತುವೆಯು ನದಿ ನೀರು ಉಕ್ಕಿ ಹರಿದ ಪರಿಣಾಮ ಕುಸಿದಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10ರ ಕೆಲವು ಭಾಗಗಳು ಕೊಚ್ಚಿ ಹೋಗಿವೆ. ದಿಢೀರ್ ಪ್ರವಾಹದಿಂದಾಗಿ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಕೆಲ ಸೇನಾ ಸಿಬ್ಬಂದಿ ಸೇರಿದಂತೆ ನಾಗರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಒದಗಿಬಂದಿದೆ. ಸಿಕ್ಕಿಂನ ಕೆಲ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.