ಸಿಎಂ ಬೊಮ್ಮಾಯಿ‌ ಭರ್ಜರಿ ರೋಡ್ ಶೋ; ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರ ಮತಯಾಚನೆ

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಧೀರಜ್ ಮುನಿರಾಜು ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಇಂದು ಬೃಹತ್ ರೋಡ್ ಶೋ‌ ನಡೆಸಿ ಮತಯಾಚನೆ ಮಾಡಿದರು.

ಅತಿ ಚಿಕ್ಕ ವಯಸ್ಸಿನ ದೊಡ್ಡ ಸಾಧನೆ ಮಾಡುವ ಉತ್ಸಾಹಿ ಯುವ ಅಭ್ಯರ್ಥಿ ಧೀರಜ್ ಮುನಿರಾಜ್ ಅವರಿಗೆ ದೊಡ್ಡ ಮನಸ್ಸಿನ ದೊಡ್ಡಬಳ್ಳಾಪುರ ಜನತೆ ದೊಡ್ಡಮಟ್ಟದಲ್ಲಿ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ ಸಿಎಂ ಬೊಮ್ಮಾಯಿ‌.

ದೊಡ್ಡಬಳ್ಳಾಪುರದ ಸಮಗ್ರ ಅಭಿವೃದ್ದಿಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ, ನೇಕಾರರ ವಿದ್ಯುತ್ ಸಬ್ಸಿಡಿಯನ್ನು ಸರ್ಕಾರವೇ ಭರಿಸಲಿದೆ, ಬೆಂಗಳೂರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಮಾಡಲು ಯೋಜನೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ನೇಕಾರ ಸಮ್ಮಾನ್ ಯೋಜನೆ ಪ್ರಾರಂಭ ಮಾಡಿದ್ದು ನಮ್ಮ ನಾಯಕರಾದ ಯಡಿಯೂರಪ್ಪನವರು, ನೇಕಾರ ಸಮ್ಮಾನ್ ಯೋಜನೆಯ ಕೈಮಗ್ಗ ನೇಕಾರರಿಗೆ ಇದ್ದ ಯೋಜನೆಯನ್ನು ಪವರ್ ಲೂಮ್ಸ್ ಯೋಜನೆಗೂ ವಿಸ್ತರಿಸಿದ್ದು ನಮ್ಮ ಸರ್ಕಾರ, 1.10 ಲಕ್ಷ ಪವರ್ ಲೂಮ್ಸ್ ನೇಕಾರರಿಗೆ ಹಣ ಸಹಾಯ ಮಾಡಿದ್ದೂ ನಮ್ಮ ಸರ್ಕಾರ ಎಂದರು.

ಶೂನ್ಯ ಬಡ್ಡಿಯ ಸಾಲ 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದೂ ನಮ್ಮ ಸರ್ಕಾರ, ತಳ ಸಮುದಾಯವನ್ನು ಸ್ವಾವಲಂಭಿಗಳನ್ನಾಗಿ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಬೆಂಗಳೂರಿನ ಎಲ್ಲಾ ವ್ಯವಸ್ಥೆ ದೊಡ್ಡಬಳ್ಳಾಪುರದಲ್ಲಿ ಸಿಗಲಿದೆ ಎಂದರು.

ನಗರದ ನೆಲದಾಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ನಲ್ಲಿ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು, ಸಚಿವ ಡಾ.ಕೆ.ಸುಧಾಕರ್, ಯಲಹಂಕ‌ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು‌ ಮುಖಂಡರು ಮೆರವಣಿಗೆಯಲ್ಲಿ‌ ಭಾಗವಹಿಸಿದ್ದರು.

Leave a Reply

Your email address will not be published. Required fields are marked *