
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಗೊಂದಲಕ್ಕೆ ಹೈಕಮಾಂಡೇ ನೇರ ಕಾರಣ ಎಂದು ಆರೋಪಿಸಿದರು. “ಕಪ್ಪಕಾಣಿಕೆಗಾಗಿ ಹೈಕಮಾಂಡ್ ಈ ಎಲ್ಲ ಆಟಗಳನ್ನು ಆಡಿಸುತ್ತಿದೆ. ನಾಕೊಡೆ ನಿ ಬಿಡೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಹೈಕಮಾಂಡ್” ಎಂದು ಕಿಡಿಕಾರಿದರು.
ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತಾ ಇಲ್ಲವಾ ಎಂಬುದರ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಈ ಕಡೆ ಇವರನ್ನು ಛೂ ಬಿಡ್ತಾರೆ, ಆ ಕಡೆ ಅವರನ್ನ ಛೂ ಬಿಡ್ತಾರೆ. ಎರಡೂ ಕಡೆಯಿಂದ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಚುನಾವಣೆ ನಡೆಸಬೇಕು ಅಲ್ವಾ? ಯಾರು ಹೆಚ್ಚು ಕೊಡ್ತಾರೋ ಅವರು ಸಿಎಂ ಆಗ್ತಾರೆ, ಇವರು ಜ್ಯಾಸ್ತಿ ಕೊಟ್ಟರೆ ಇವರು ಆಗ್ತಾರೆ ಎಂಬಂತೆ ಹೈಕಮಾಂಡ್ ಎತ್ತಿಕಟ್ಟುತ್ತಿದೆ ಎಂದು ಆರೋಪಿಸಿದರು.
“ಇಬ್ಬರು ನಾಯಕರ ಜಗಳದಲ್ಲಿ ಇಡೀ ರಾಜ್ಯ ಹಾಳಾಗ್ತಿದೆ. ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗಭಾಷಿಯಲ್ಲಿ ಅನ್ನೋ ತರ ಆಗಿದೆ” ಎಂದು ವ್ಯಂಗ್ಯವಾಡಿದರು.
ಮೆಟ್ರೋ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರ ಮಾಡಿದೆ ಎಂದು ಆರೋಪ ಮಾಡುತ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಒಂದು ಕಮಿಟಿ ರಚನೆ ಆಗಿದೆ. ಕಮಿಟಿ ಮತ್ತು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಚಾರ. ಅವರಿಬ್ಬರು ಮಾತನಾಡಿಕೊಂಡು ಮಾಡಬೇಕು. ಕಮಿಟಿ ಅವರು ಮಾಡಿದ್ದಾರೆ ಎಂದು ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ಮೆಟ್ರೋ ಲಾಸ್ ನಲ್ಲಿ ಇಲ್ಲ. ನಿಮ್ ಖಜಾನೆ ಖಾಲಿ ಆಗಿದೆ. ಎಲ್ಲಾ ಕಡೆಯಿಂದಲೂ ಹೇಗಾದ್ರು ಮಾಡಿ ತುಂಬಿಕೊಳ್ಳಬೇಕು. ಕಾಂಗ್ರೆಸ್ ಗೆ ಎಟಿಎಂ ಇರುವುದು ಕರ್ನಾಟಕದಲ್ಲೇ. ಕೇರಳ, ಪಚ್ಚಿಮ ಬಂಗಾಳ, ತಮಿಳುನಾಡಿಗೆ ದುಡ್ಡು ಕೊಡಬೇಕು. ಆದ್ದರಿಂದ ಕಡೆಯಲ್ಲೂ ಕೈ ಆಡಿಸುತ್ತಿದ್ದಾರೆ ಎಂದು ಹೇಳಿದರು..