ಸಿಂಗ್ರಹಳ್ಳಿ ಗ್ರಾಮದ ಗೋಮಾಳ ಜಮೀನು ಉಳ್ಳವರಿಂದಲೇ ಒತ್ತುವರಿ- ಮುನಿಆಂಜಿನಪ್ಪ ಆರೋಪ

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಿಂಗರಹಳ್ಳಿ ಗ್ರಾಮದ ಸರ್ವೆ ನಂಬರ್ -6 ರಲ್ಲಿ ಸುಮಾರು 60 ಅಕ್ರಮ ಸೈಟುಗಳು ಶ್ರೀಮಂತ ಕುಟುಂಬದ ವ್ಯಕ್ತಿಗಳಿಗೆ ನಿವೇಶನ ರಹಿತರಂತೆ ಸೈಟುಗಳನ್ನು ಪಡೆದು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಇದು ಗೋಮಾಳ ಜಮೀನು ಆಗಿದ್ದು ಉಳ್ಳವರೇ ಭೂ ಒತ್ತುವರಿ ಮಾಡಿದ್ದಾರೆ ಅವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ಸಂಘಟನೆಯ ರಾಜ್ಯ ಅಧ್ಯಕ್ಷ ಮುನಿಯ ಅಂಜಿನಪ್ಪ ಒತ್ತಾಯಿಸಿದ್ದಾರೆ.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ,ಸಮತಾ ಸೈನಿಕ ದಳ,ಬಹುಜನ ಸೇವಾ ಸಮಿತಿ ಮತ್ತು ಜನಧ್ವನಿ ವೇದಿಕೆ
ಸೇರಿದಂತೆ ಹಲವು ಸಂಘಟನೆಗಳ ವತಿಯಿಂದ ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗ್ರಹಳ್ಳಿಯ ಗೋಮಾಳ ಜಮೀನು ಒತ್ತುವರಿಯ ಕುರಿತು ಕಠಿಣ ಕ್ರಮಕ್ಕೆ ಒತ್ತಾಯಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಭೂ ಒತ್ತುವರಿದಾರರಿಗೆ ಯಲಹಂಕ ತಾಲೂಕಿನಲ್ಲಿ ಸಾಕಷ್ಟು ವಾಸದ ಮನೆಗಳು ಅಂಗಡಿಗಳು ಮತ್ತು ಬಾಡಿಗೆ ನೀಡಿರುವ ಕಟ್ಟಡಗಳು ಇರುವುದಾಗಿ ತಿಳಿದು ಬಂದಿದೆ. ನಿರ್ಗತಿಕರೆಂದು ಹೇಳಿಕೊಂಡು ಅಕ್ರಮವಾಗಿ ಸಿಂಗ್ರಹಳ್ಳಿಯ ಗೋಮಾಳ ಜಾಗದಲ್ಲಿ ಏಕಾಏಕಿ ನಿವೇಶನಗಳನ್ನು ಕಟ್ಟಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವುದು ಎಷ್ಟು ಸರಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಸಮತಾ ಸೈನಿಕ ದಳ ಸಂಘಟನೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ ವೆಂಕಟರಮಣಪ್ಪ ಮಾತನಾಡಿ ಸುಮಾರು 60ಕ್ಕೂ ಹೆಚ್ಚು ಜನರು ಸರ್ಕಾರಿ ಗೋಮಾಳ ಜಮೀನನಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರದಿಂದ ಪ್ರಾಥಮಿಕವಾಗಿ ಹಕ್ಕು ಪತ್ರ ಹೊಂದಿರುವ ಮೂಲ ಮಂಜೂರು ದಾರರಿಗೆ ಮೊದಲ ಪ್ರಾಮುಖ್ಯತೆ ನೀಡಿ ಅವರಿಗೆ ಜಮೀನನ್ನು ನೀಡದೆ ಕಂದಾಯ ಅಧಿಕಾರಿಗಳು ಸರ್ವೇ ನಂ. 6ರಲ್ಲಿ ಜಾಗವಿಲ್ಲವೆಂದು ಹೇಳುತ್ತಿದ್ದಾರೆ .

ಬಲಾಢ್ಯರ ಮೋಜು-ಮಸ್ತಿಗಾಗಿ ಗೋಮಾಳ ಜಮೀನನ್ನು ರಾಜಾರೋಷವಾಗಿ ಬಳಸುವ ಅಕ್ರಮ ದಂಧೆಗೆ ಇಳಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕುಲಂಕುಶವಾಗಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಲವು ಸಂಘಟನೆಗಳ ಸಹಕಾರದೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!