ಸಿಂಕ್ ಹೋಲ್ ಗೆ ಕುಸಿದು ಬಿದ್ದ ಡ್ರೈನೇಜ್ ಸ್ವಚ್ಛಗೊಳಿಸುವ ವಾಹನ: ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರು

ಮಹಾರಾಷ್ಟ್ರದ ಪುಣೆಯಲ್ಲಿ ನಾಗರಿಕ ನೈರ್ಮಲ್ಯ ಇಲಾಖೆಗೆ ಸೇರಿದ ಟ್ರಕ್ ಶುಕ್ರವಾರ ನಗರದ ಅಂಚೆ ಕಚೇರಿಯ ಬಳಿ ತೆರೆದಿರುವ ಸಿಂಕ್‌ಹೋಲ್‌ಗೆ ಬಿದ್ದಿದೆ. ಡ್ರೈನೇಜ್ ಲೈನ್‌ಗಳನ್ನು ಸ್ವಚ್ಛಗೊಳಿಸಲು ಬಳಸಲಾಗಿದ್ದ ಜೆಟ್ಟಿಂಗ್ ಯಂತ್ರದ ಟ್ರಕ್‌ ಸಿಂಕ್‌ಹೋಲ್‌ಗೆ ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಜನನಿಬಿಡ ಬುಧ್ವರ್ ಪೇಠ ಪ್ರದೇಶದಲ್ಲಿ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಟ್ರಕ್ ಸಿಂಕ್‌ಹೋಲ್‌ಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೊಡ್ಡ ಟ್ರಕ್ ಸಿನಿಮೀಯ ರೀತಿಯಲ್ಲಿ ಸಿಂಕ್‌ಹೋಲ್‌ಗೆ ಮುಳುಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಸ್ಥಳೀಯರೊಬ್ಬರು ಘಟನಾ ಸ್ಥಳಕ್ಕೆ ಧಾವಿಸಿ ಮುಳುಗುತ್ತಿದ್ದ ಟ್ರಕ್‌ನ ಡ್ರೈವರ್ ಸೀಟ್‌ನಿಂದ ಹೊರಬರಲು ಸಹಾಯ ಮಾಡಿದ್ದರಿಂದ ಕೊನೆಯ ಕ್ಷಣದಲ್ಲಿ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅದು ಯಾವುದೇ ಸಾರ್ವಜನಿಕ ರಸ್ತೆಯಲ್ಲಿಲ್ಲ, ಆದರೆ ಅಂಚೆ ಆವರಣದಲ್ಲಿ ಮೊದಲು ಹಳೆಯ ಬಾವಿ ಇತ್ತು ಮತ್ತು ಈಗ ಅದನ್ನು ಸ್ಲ್ಯಾಬ್‌ನಿಂದ ಮುಚ್ಚಲಾಗಿದೆ ಎಂದು ಹೇಳಲಾಗಿದೆ. ಈ ಡ್ರೈನೇಜ್ ವಾಹನ ಭಾರವಾಗಿದ್ದರಿಂದ ಈ ಘಟನೆ ನಡೆದಿದೆ.  ಈಗ ಅದನ್ನು 2 ಕ್ರೇನ್‌ಗಳ ಸಹಾಯದಿಂದ ತೆಗೆದುಹಾಕಲಾಗಿದೆ… ತನಿಖೆ ನಡೆಸಲಾಗುವುದು… ಯಾವುದೇ ಗಾಯಗಳಾಗಿಲ್ಲ ಎಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಕಮಿಷನರ್ ರಾಜೇಂದ್ರ ಭೋಸ್ಲೆ ಹೇಳಿದ್ದಾರೆ.

Leave a Reply

Your email address will not be published. Required fields are marked *