ದೊಡ್ಡಬಳ್ಳಾಪುರ :ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಹುಲುಕುಂಟೆ ಗ್ರಾಮ ಪಂಚಾಯ್ತಿ ಪಿ.ಡಿ.ಒ ಹಾಗೂ ಸಿಬ್ಬಂದಿ ವಿರುದ್ಧ ಗ್ರಾಮ ಪಂಚಾಯಿತಿ ಎದರು ಅಹೋರಾತ್ರಿ ಧರಣಿ ಕೂರುವುದಾಗಿ ಪತ್ರಿಕಾ ವಿತರಕರು ಹಾಗೂ ವಕೀಲ ಹುಲುಕುಂಟೆ ಮಹೇಶ್ ರವರು ತಹಶೀಲ್ದಾರ್, ತಾ.ಪಂ ಇ.ಒ, ಜಿ.ಪಂ ಸಿ.ಇ.ಒ.ರವರಿಗೆ ತಿಳಿಸಿ ಪತ್ರ ಬರೆದಿದ್ದಾರೆ.
10 ದಿನ ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಬೇಸತ್ತು ಜ. 13ರ ಸೋಮವಾರದಿಂದ ಹುಲುಕುಂಟೆ ಗ್ರಾಮಪಂಚಾಯಿತಿ ಆವರಣದಲ್ಲಿ ಪತ್ರಿಕಾ ವಿತರಕರು ಹಾಗೂ ವಕೀಲರು ಆದ ಹುಲುಕುಂಟೆ ಮಹೇಶ ಅವರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಕೂರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಮಾರು 50 ವರ್ಷಗಳ ಹಿಂದೆ ಆಂಜನೇಯ ಸ್ವಾಮಿ ಇನಾಮ್ತಿ ಜಮೀನಿನಲ್ಲಿ ಹಕ್ಕುಪತ್ರ ನೀಡಿ ಅವುಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರೂ ಸಹ ಅವರಿಗೆ ಖಾತಾ ಮಾಡಿಕೊಡಲು ನಮ್ಮ ಬಳಿ ದಾಖಲೆಗಳಿಲ್ಲ. ನೀವೇ ಒದಗಿಸಿ ಎನ್ನುತ್ತಿದ್ದಾರೆಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ವಕೀಲ ಮಹೇಶ್ ದೂರಿದ್ದಾರೆ.
ಗ್ರಾಮದ ಸುಮಾರು 40 ಕುಟುಂಬಗಳು ಸರ್ವೆ ನಂ.162ರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅದರಲ್ಲಿ ಕೆಲವರಿಗೆ ತಹಸೀಲ್ದಾರ್ ಕಛೇರಿಯಿಂದ 94ಸಿ ಅಡಿ ತಾತ್ಕಾಲಿಕ ಹಕ್ಕು ಪತ್ರ ನೀಡಿರುತ್ತಾರೆ. ಕೆಲವರಿಗೆ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಖಾತಾ ಮಾಡಿಕೊಟ್ಟಿರುತ್ತಾರೆ. ಆದರೆ, ಈಗ ಆ ಜಾಗ ರಸ್ತೆಗೆ ಸೇರುವುದೆಂದು ಗ್ರಾಮ ಪಂಚಾಯ್ತಿ ಪಿ.ಡಿ.ಓ ರವರು ತಿಳಿಸುತ್ತಾರೆ. ಆದರೆ ಯಾವ ರಸ್ತೆ, ಯಾರು ಮಂಜೂರು ಮಾಡಿದ್ದಾರೆಂದರೆ ಅವರ ಬಳಿ ಉತ್ತರವಿಲ್ಲ. ರಾ.ಹೆ.ಗೆ ಭೂಸ್ವಾದೀ ನವಾದ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವ ಮುನ್ನ 2024ರಲ್ಲಿ ನನಗೆ ಕಟ್ಟಡ ಕಟ್ಟಲು ಗ್ರಾ.ಪಂ.ವತಿಯಿಂದ ಅನುಮತಿ ನೀಡಿ ಅದರ ನವೀಕರಣಕ್ಕೆ ಅರ್ಜಿ ಸಲ್ಲಿಸಿದಾಗ ನಿರಾಕರಿಸುತ್ತಿದ್ದಾರೆ.
ವಿದ್ಯಾವಂತರಾದ ನಮಗೆ ಈ ಗತಿ ಆದರೆ ಗ್ರಾಮೀಣ ಪ್ರದೇಶದ ಅವಿದ್ಯಾವಂತ ಹಿರಿಯ ನಾಗರೀಕರ ಕತೆ ಹೇಗೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಧರಣಿ ಆರಂಭಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಹುಲುಕುಂಟೆ ಮಹೇಶ ಅವರು ತಿಳಿಸಿದ್ದಾರೆ.
ಪ್ರತಿಭಟನೆ ಬಗ್ಗೆ ಹುಲುಕುಂಟೆ ಗ್ರಾಮ ಪಂಚಾಯತಿ ಪಿ.ಡಿ.ಒ, ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ಇ.ಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿ.ಇ.ಒ.ರವರ ಗಮನಕ್ಕೆ ತಂದು 10 ದಿನ ಕಳೆದಿದ್ದರೂ ಪ್ರಯೋಜನವಾಗಿಲ್ಲ.
ಈ ಒಂದು ಧರಣಿಗೆ ಹುಲುಕುಂಟೆ ಗ್ರಾಮ ಪಂಚಾಯ್ತಿ ನೌಕರರಿಂದ ಯಾವ ಸಾರ್ವಜನಿಕರಿಗೆ ಅವರ ನ್ಯಾಯಯುತ ಬೇಡಿಕೆ ಈಡೇರಿಲ್ಲವೋ ಅವರು ನನ್ನ ಶಾಂತಿಯುತ ಧರಣಿಗೆ ಬೆಂಬಲ ಸೂಚಿಸಬಹುದು ಎಂದು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಬರೆದ ಪತ್ರದಲ್ಲೇನಿದೆ…
ಹುಲುಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ.ನಂ.162ರಲ್ಲಿ ದೊಡ್ಡಬಳ್ಳಾಪುರ ತಹಶೀಲ್ದಾರ್ ಕಛೇರಿಯಿಂದ ಕರ್ನಾಟಕ ಭೂಕಂದಾಯ(ತಿದ್ದುಪಡಿ) ಕಾಯ್ದೆ 1999 ಕಾಲಂ.94ಸಿ ಅನ್ವಯ ಕೆಲವರಿಗೆ ತಾತ್ಕಾಲಿಕ ಹಕ್ಕು ಪತ್ರ ವಿತರಿಸಿದ್ದು ಸರಿಯಷ್ಟೇ, ತದ ನಂತರ ಹುಲುಕುಂಟೆ ಗ್ರಾಮ ಪಂಚಾಯ್ತಿಯವರು ಜನರಿಂದ ಹಣ ಕಟ್ಟಿಸಿಕೊಂಡು ಹಲವಾರು ಮಂದಿಗೆ ನಮೂನೆ ಹತ್ತನ್ನು ವಿತರಿಸಿದ್ದು ಪ್ರತಿವರ್ಷ ಕಂದಾಯವನ್ನು ಸಹ ವಸೂಲಿ ಮಾಡುತ್ತಿರುತ್ತಾರೆ. ಅಲ್ಲದೇ ಇನ್ನು ಕೆಲವರು ಯಾವುದೇ ದಾಖಲೆಗಳಿಲ್ಲದೇ ಮನೆಕಟ್ಟಿಕೊಂಡಿರುತ್ತಾರೆ. ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಹುಲುಕುಂಟೆ ಗ್ರಾಮ ಪಂಚಾಯ್ತಿಯವರು ಅಲ್ಲಿ ವಾಸಿಸುತ್ತಿರುವ 20ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ನೆರವನ್ನೂ ಸಹ ನೀಡಿದ್ದು ಈ ಪ್ರದೇಶದಲ್ಲಿರುವ 25ಕ್ಕಿಂತ ಹೆಚ್ಚು ಕುಟುಂಬಗಳು ದಲಿತ ಕುಟುಂಬಗಳಾಗಿವೆ. ನೀವು ಮೇಲಿನ ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಹುಲುಕುಂಟೆ ಗ್ರಾಮ ಪಂಚಾಯ್ತಿಯಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಂಡು ಗ್ರಾಮ ಪಂಚಾಯ್ತಿಯವರು ಕಾನೂನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಿ ಅವರು ನಮೂನೆ ಹತ್ತನ್ನು ವಿತರಿಸುವ ಮುನ್ನ ಅಭಿವೃದ್ಧಿಶುಲ್ಕ ಕಟ್ಟಿಸಿಕೊಂಡ ಸಂದರ್ಭದಲ್ಲಿ ಕಟ್ಟಿಸಿಕೊಂಡ ಮೊತ್ತಕ್ಕೆ ಆಗ ಎಷ್ಟು ಜಾಗ ಬರುತ್ತಿತ್ತೋ ಈಗ ಅಷ್ಟು ಜಾಗಕ್ಕೆ ಎಷ್ಟು ಮೊತ್ತವಾಗುವುದೋ ಅದನ್ನು ಪಂಚಾಯ್ತಿಯಿಂದಲೇ ವಸೂಲಿ ಮಾಡಿ ಸಂಬಂಧಪಟ್ಟವರಿಗೆ ನೀಡಿ ಅವರ ಮನೆಗಳನ್ನು ತೆರವುಗೊಳಿಸಬೇಕು ಅಥವಾ ಪಂಚಾಯ್ತಿಯವರು ಸರಿಯಾದ ಮಾರ್ಗವನ್ನೇ ಅನುಸರಿಸಿದ್ದರೆ ಈಗ ಯಾರ್ಯಾರು ಎಷ್ಟೆಷ್ಟು ಜಾಗದಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೋ ಅಥವಾ ಎಷ್ಟು ಅಳತೆಗೆ ಆಭಿವೃದ್ಧಿ ಶುಲ್ಕ ಕಟ್ಟಿದ್ದಾರೋ ಅದೇ ಅಳತೆಗೆ ಸಕ್ರಮಗೊಳಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ಅಹೋರಾತ್ರಿ ನಡೆಸುವುದರ ಬಗ್ಗೆ
ನನ್ನ ಕಾನೂನುನುಬದ್ದ ಮನವಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಗ್ರಾಮ ಪಂಚಾಯ್ತಿ ಸಿಬ್ಬಂದಿ ಬಗ್ಗೆ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ನನಗೆ ನ್ಯಾಯ ಕೊಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ತಾಲ್ಲೂಕು ಪಂಚಾಯ್ತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿ 15 ದಿನ ಕಳೆದಿದ್ದರೂ ಗ್ರಾಮ ಪಂಚಾಯ್ತಿಯಿಂದ ಸೂಕ್ತ ಕ್ರಮವಾಗಿಲ್ಲ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯ್ತಿ ಕೇಂದ್ರದಲ್ಲೇ ವಾಸವಿರಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. 2009-10 ರಿಂದ 2011-12ನೇ ಸಾಲಿನವರೆಗೆ ನರೇಗಾ ಕಾಮಗಾರಿಗಳಲ್ಲಿನ ಅವ್ಯವಹಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರಕಾರ ನೇಮಿಸಿದ್ದ ಒಂಬುಡ್ಸ್ ಮನ್ ರವರು ವರದಿ ನೀಡಿದ್ದರು. ಒಂಬುಡ್ಸ್ ಮನ್ ವರದಿಯಲ್ಲಿ ಉಲ್ಲೇಖಿಸಿದ್ದ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವಿರುದ್ಧ 12 ವರ್ಷ ಕಳೆದಿದ್ದರೂ ಯಾವ ಕ್ರಮ ಕೈಗೊಂಡಿದ್ದೀರೆಂಬ ಕುರಿತು ನನಗೆ ಇದುವರೆಗೆ ನೀವು ಮಾಹಿತಿ ನೀಡಿಲ್ಲ. ಈ ಎಲ್ಲಾ ವಿಷಯಗಳಲ್ಲಿ ನೀವು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ನಾನು ನನ್ನ ನಿರ್ಧಾರದಂತೆ ಗ್ರಾಮ ಪಂಚಾಯ್ತಿ ಮುಂದೆ ಧರಣಿ ಕೂರಲು ಕಟಿಬದ್ಧನಾಗಿರುತ್ತೇನೆ. ಈ ಅರ್ಜಿಯ ಜೊತೆ ದಿನಾಂಕ 26/09/2011 ರಂದು ಬೇಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಒಂಬುಡ್ಸ್ ಮನ್ ರವರು ನೀಡಿದ್ದ ವರದಿಯ ಪ್ರತಿಯನ್ನು ಲಗತ್ತಿಸಿರುತ್ತೇನೆ ಹಾಗೂ ಹುಲುಕುಂಟೆ ಗ್ರಾಮ ಪಂಚಾಯ್ತಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯ್ತಿಗಳಿಗೆ ನೀಡಿರುವ ಅರ್ಜಿಯ ಪ್ರತಿಗಳನ್ನು ಸಹ ಲಗತ್ತಿಸಲಾಗಿದೆ ಎಂದು ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಕೂರುತ್ತಿರುವ ಬಗ್ಗೆ ಅಧಿಕಾರಿಗಳ ಬರೆದ ಪತ್ರದಲ್ಲಿ ತಿಳಿಸಿದ್ದಾರೆ..