Categories: ಲೇಖನಗಳು

ಸಾಮಾಜಿಕ ಪರಿವರ್ತನೆಗಾಗಿ ಸಿದ್ಧರಾಗಿ…….

ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವ ಒಂದಷ್ಟು ಸಾಮಾನ್ಯ ಜನರ ಅವಶ್ಯಕತೆ ಈ ಸಮಾಜಕ್ಕೆ ಈಗ ಇದೆ…..

ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಒಳ್ಳೆಯದು ಎನ್ನುವುದು, ಕೆಟ್ಟದ್ದನ್ನು ಒಳ್ಳೆಯದು ಎನ್ನುವುದು ಬಹಳ ಸುಲಭ ಮತ್ತು ಅದರಿಂದ ಯಾವುದೇ ಹಾನಿಯೂ ಇಲ್ಲ. ಸಮಸ್ಯೆ ಇರುವುದೇ ಕೆಟ್ಟವರು ಮತ್ತು ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವಾಗ. ನೀವು ಶ್ರೀಮಂತ ಉದ್ಯಮಿಯೋ, ರಾಜಕಾರಣಿಯೋ, ಸಿನಿಮ ನಟರೋ ಅಥವಾ ಯಾವುದೇ ಹಣವಂತ ವ್ಯಕ್ತಿಯಾಗಿದ್ದು ನಿಮ್ಮ ಬಳಿ ಇರುವ ಹಣದಿಂದ ಒಂದಷ್ಟು ಜನರಿಗೆ ಅಥವಾ ಸಮಾಜಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರೆ ನಿಮ್ಮನ್ನು ಈ ಸಮಾಜ ಅತ್ಯಂತ ಅಭಿಮಾನದಿಂದ ಆರಾಧಿಸುತ್ತದೆ, ಅಭಿಮಾನಿಸುತ್ತದೆ ಮತ್ತು ಗೌರವವನ್ನು ನೀಡುತ್ತದೆ. ಉದಾಹರಣೆಗೆ ಒಬ್ಬ ಪ್ರಖ್ಯಾತ ಮತ್ತು ಶ್ರೀಮಂತ ವ್ಯಕ್ತಿ ಕೆರೆಕಟ್ಟಿಸುವುದು, ಆಸ್ಪತ್ರೆ ಕಟ್ಟಿಸುವುದು, ಶಿಕ್ಷಣ ಸಂಸ್ಥೆ ಕಟ್ಟಿಸುವುದು, ಆ ಮೂಲಕ ಬಡವರಿಗೆ ಸಹಾಯ ಮಾಡುವುದು, ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡುವುದು ಮುಂತಾದ ಏನೋ ಮಾಡಿದರೆ ಜನ ಅದೊಂದು ಮಹತ್ವದ ಉಪಕಾರ ಎಂಬಂತೆ ಸ್ಮರಿಸುತ್ತದೆ……

ಆದರೆ ಈ ಸಮಾಜದ ಅತ್ಯಂತ ಮಹತ್ವದ ವಿಷಯಗಳಾದ ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ, ಇಲ್ಲಿನ ಸಮಕಾಲೀನ ಸಮಸ್ಯೆಗಳ ಬಗ್ಗೆ, ಶೋಷಣೆಯ ಬಗ್ಗೆ ಮಾತನಾಡುವವರು ಯಾರು ? ಮೇಲೆ ಹೇಳಿದ ದಾನಿಗಳು ಇವುಗಳ ಬಗ್ಗೆ ಹೆಚ್ಚು ಮಾತನಾಡದೆ ರಾಜಕಾರಣಿಗಳು, ಅಧಿಕಾರಸ್ತರು, ಪತ್ರಕರ್ತರು, ಸ್ವಾಮೀಜಿಗಳು, ಸಿನಿಮಾನಟರು, ಉದ್ಯಮಿಗಳು ಇಂಥವರ ಜೊತೆ ಒಡನಾಟ ಇಟ್ಟುಕೊಂಡು ತಮ್ಮ ವ್ಯಾಪಾರ, ವಹಿವಾಟು, ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಂಡು ತಾವು ಮತ್ತಷ್ಟು ಪ್ರಖ್ಯಾತರಾಗುತ್ತಾ, ಹಣ ಮಾಡುತ್ತಾ, ಜೀವನದ ಸುಖಭೋಗಗಳನ್ನು ಅನುಭವಿಸುತ್ತಾ, ಸಾರ್ವಜನಿಕವಾಗಿ ಒಳ್ಳೆಯ ಹೆಸರಿನೊಂದಿಗೆ ಬದುಕುತ್ತಿರುತ್ತಾರೆ……

ಹಾಗಾದರೆ ಸರ್ಕಾರದ ಭ್ರಷ್ಟಾಚಾರವನ್ನು, ಅಧಿಕಾರಿಗಳ ನಿರ್ಲಕ್ಷ್ಯವನ್ನು, ಪತ್ರಕರ್ತರ ಪಕ್ಷಪಾತವನ್ನು, ಸ್ವಾಮೀಜಿಗಳ ವಂಚನೆಯನ್ನು ಮಾತನಾಡುವವರಾದರು ಯಾರು? ಪ್ರಶ್ನಿಸುವವರಾದರು ಯಾರು?……..

ಸಾಮಾನ್ಯ ಜನರು ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಿಗೆ ಇಡೀ ವ್ಯವಸ್ಥೆಯನ್ನು ತಲುಪುವ ಶಕ್ತಿ ಇರುವುದಿಲ್ಲ. ದುರಂತವೆಂದರೆ ಆ ಶಕ್ತಿ ಇರುವವರು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು, ಆತ್ಮ ವಂಚನೆ ಮಾಡಿಕೊಂಡು ತಾವು ಸುಖವಾಗಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು…..

ನಾವು ಯಾರನ್ನು ಮಹಾನ್ ದಾನಿಗಳು, ಸಮಾಜ ಸೇವಕರು ಎಂದು ಹೇಳುತ್ತೇವೆಯೋ ಅವರುಗಳು ಆಂತರ್ಯದಲ್ಲಿ ತಮ್ಮ ಸ್ವಾರ್ಥಕ್ಕೆ ಮಹತ್ವ ಕೊಟ್ಟಿರುತ್ತಾರೆ ಎಂಬುದು ಸಾಕಷ್ಟು ಜನರಲ್ಲಿ ಕಾಣಬಹುದು. ಅಪರೂಪದ ಕೆಲವು ನಿಸ್ವಾರ್ಥರನ್ನು ಹೊರತುಪಡಿಸಿ ಯಾರೂ ಈ ವ್ಯವಸ್ಥೆಯ ದೋಷಗಳ ಬಗ್ಗೆ ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡದೆ ತಮ್ಮ ವೈಯಕ್ತಿಕ ಇಮೇಜ್ ಅನ್ನು ಕಾಪಾಡಿಕೊಳ್ಳುತ್ತಾ ಪ್ರಶಸ್ತಿ, ಸನ್ಮಾನ, ಅಧಿಕಾರ, ಜನರಿಂದ ಜೈಕಾರದ ಘೋಷಣೆಗಳು, ಪತ್ರಕರ್ತರಿಂದ ವಿಶೇಷ ಕಾರ್ಯಕ್ರಮಗಳನ್ನು ಮಾಡಿಸಿಕೊಂಡು ತಾವು ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಾ, ತಾವು ಜಾತಿವಾದಿಗಳು, ಕೋಮುವಾದಿಗಳು, ಭ್ರಷ್ಟಾಚಾರಿಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಇರುತ್ತಾರೋ ಅವರ ಬಗ್ಗೆ ಸಣ್ಣ ಅಸಮಾಧಾನವಿದೆ……

ಮುಖವಾಡಗಳ ಮರೆಯಲ್ಲಿ ಎಂದು ಹೇಳುವುದು ಇದನ್ನೇ, ಅಂದರೆ ಜನರನ್ನು ಭ್ರಮೆಗಳಲ್ಲಿ ತೇಲಿಸುತ್ತಾ, ವಾಸ್ತವದಿಂದ ಅವರನ್ನು ದೂರ ಮಾಡಿ ತಾವು ತಮ್ಮ ಸುಖ ಭೋಗಕ್ಕಾಗಿ ಜನರ ಮೇಲೆ ನಿಯಂತ್ರಣ ಹೊಂದುವ ಪ್ರಕ್ರಿಯೆ. ಇನ್ನು ಎಲ್ಲರೂ ಅವರವರ ಸುರಕ್ಷತೆಯನ್ನೇ ನೋಡಿಕೊಂಡರೆ ಸಮಾಜ ಸುಧಾರಣೆ ಹೇಗೆ ಸಾಧ್ಯ. ಇದರ ಲಾಭವನ್ನೇ ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಿಗಳು, ಪತ್ರಕರ್ತರು, ಸ್ವಾಮೀಜಿಗಳು ಪಡೆಯುವುದು. ಅವರಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿದೆ ಈ ಜನ ಒಗ್ಗಟ್ಟಾಗುವುದಿಲ್ಲ, ಸಾಮಾನ್ಯ ಜನ ಅವರದೇ ಬಲೆಯೊಳಗೆ ಸಿಲುಕಿದ್ದಾರೆ, ಅವರನ್ನು ವಂಚಿಸುವುದು ಅಥವಾ ಶೋಷಿಸುವುದು ಬಹಳ ಸುಲಭ. ಅವರು ಹಾಗೆಯೇ ಇರಲಿ ಅಂದರೆ ಬಡತನ ಮತ್ತು ಬಡವರು ಹಾಗೆ ಇರಲಿ ನಾವು ಶ್ರೀಮಂತರಾಗುತ್ತ ಬಿಡಿಗಾಸನ್ನು ಅವರಿಗೆ ಸೇವೆ ಹೆಸರಲ್ಲಿ ಚೆಲ್ಲುತ್ತಾ ಆರಾಮಾಗಿರಬಹುದು, ವ್ಯವಸ್ಥೆಯ ಹುಳುಕುಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆ ಅದು ನಮ್ಮ ಬುಡಕ್ಕೆ ಬರುತ್ತದೆ. ಆದ್ದರಿಂದ ಈಗಿರುವ ವ್ಯವಸ್ಥೆಯೇ ಉತ್ತಮ ಎಂಬುದು ಆ ದೊಡ್ಡ ವ್ಯಕ್ತಿಗಳ ಆಂತರ್ಯದ ಆಸೆ……

ಆದ್ದರಿಂದ ಕೆಟ್ಟವರನ್ನು ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯ ತೋರಿಸೋಣ ಆಗ ಮಾತ್ರ ಒಂದು ಸಣ್ಣ ಪರಿವರ್ತನೆ ಸಾಧ್ಯ. ಇಲ್ಲದಿದ್ದರೆ ವ್ಯವಸ್ಥೆ ಹೀಗೇ ಮುಂದುವರೆದರಿಯುತ್ತದೆ. ಸ್ವಲ್ಪ ತ್ಯಾಗಕ್ಕೆ ಸಿದ್ದರಾಗಿ. ಆಯ್ಕೆ ನಿಮ್ಮ ಮುಂದಿದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

2 hours ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

12 hours ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

14 hours ago

ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ

ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…

15 hours ago

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

24 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

1 day ago