ಸಾಮಾಜಿಕ ಗಣತಿ ವರದಿ ಸರ್ಕಾರ ಸ್ವೀಕಾರ- ವರದಿ ಸಚಿವ ಸಂಪುಟದ ಮುಂದಿರಿಸಿ, ಶಿಫಾರಸ್ಸು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವು- ಸಿಎಂ ಸಿದ್ದರಾಮಯ್ಯ

 

ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳ ನಂತರವೂ ಸೌಲಭ್ಯಗಳಿಂದ ವಂಚಿತರಾಗಿರುವ ಜನರನ್ನು ಗುರುತಿಸುವ ಉದ್ದೇಶದಿಂದ ನಮ್ಮ ಸರ್ಕಾರ ಸಾಮಾಜಿಕ ಗಣತಿಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ, ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದ್ದು, ಆದರೆ, ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಜಾತಿ ಜನಗಣತಿ ನಮ್ಮ ಪಕ್ಷದ ಸಿದ್ದಾಂತವೂ ಆಗಿದೆ. ದೇಶದಲ್ಲಿ ಜನಸಂಖ್ಯೆಯ ಗಣತಿಯೊಂದಿಗೆ ಜಾತಿ ಗಣತಿ ಕಾರ್ಯ 1930ರ ನಂತರ ಆಗಿಲ್ಲ. ಈಗ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಹಿಂದುಳಿದವರಿಗೆ, ದಲಿತ- ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆಯಬೇಕೆಂಬುದು ಸಂವಿಧಾನ ರಚಿಸಿದ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಉದೇಶವಾಗಿತ್ತು. ಜನ ಅವಕಾಶಗಳಿಂದ ವಂಚಿತರಾಗಿರುವುದರಿಂದಲೇ ಅಸಮಾನತೆ ಸೃಷ್ಟಿಯಾಗಿದ್ದು, ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಲು ಬಾಬಾ ಸಾಹೇಬರು ಪ್ರಯತ್ನಿಸಿದರು. ಸಾಮಾಜಿಕ ಜವಾಬ್ದಾರಿಯನ್ನು ಈ ತಲೆಮಾರಿನಲ್ಲಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಪೀಠಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ರಾಜ್ಯದಾದ್ಯಂತ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.

ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಉತ್ತಮ ಮಾನವರಾಗಿ ರೂಪಿಸುವಂತಹ ಶಿಕ್ಷಣವೇ ಗುಣಮಟ್ಟದ ಶಿಕ್ಷಣವಾಗಿದೆ. ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳಿಂದ ಮುಕ್ತರಾಗಿ ಕುವೆಂಪು ಹೇಳಿದ ಹಾಗೆ ವಿಶ್ವ ಮಾನವರಾಗಬೇಕಿದೆ. ವೈಜ್ಞಾನಿಕತೆ, ವೈಚಾರಿಕತೆ, ಸಮಾಜಮುಖಿಯಾದ ಜವಾಬ್ದಾರಿ ಬೆಳೆಯದೆ ಹೋದರೆ ವಿದ್ಯೆ ದೊರೆತು ಏನು ಪ್ರಯೋಜನ? ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಬದುಕಿ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಯೋಚಿಸಬೇಕಿದೆ ಎಂದು ತಿಳಿಸಿದರು.

ವಸತಿ ನಿಲಯಗಳಲ್ಲಿ ಕಲಿತವರು ಇಂದು ಅನೇಕ ಮಂದಿ ಉನ್ನತ ಸ್ಥಾನಗಳಲ್ಲಿದ್ದಾರೆ. ಈ ರೀತಿ ಉನ್ನತ ಹುದ್ದೆಗಳಲ್ಲಿರುವವರು ಸಮಾಜಕ್ಕೆ ಹಿಂತಿರುಗಿ ಕೊಡುಗೆ ನೀಡಬೇಕಾಗಿದೆ. ನೀವು ಯಾವ ಕ್ಷೇತ್ರದಲ್ಲಿದ್ದೀರಿ ಅಲ್ಲಿ ಸಮಾಜದ ದೀನ ದಲಿತರಿಗಾಗಿ ನಿಮ್ಮ ಕೈಯಿಂದಾಗುವಷ್ಟು ಸಹಾಯ ಮಾಡಿ. ಇದುವೇ ನೀವು ಸಮಾಜಕ್ಕೆ ನೀಡುವ ಕೊಡುಗೆ. ಸಮಾಜದ ಋಣ ತೀರಿಸಿದರೆ ನಮ್ಮ ಜೀವನ ಸಾರ್ಥಕ ಎಂದರು.

ಸಮಾಜದ ಬಗ್ಗೆ ಚಿಂತಿಸದೆ, ಕುಟುಂಬದ ಬಗ್ಗೆ ಮಾತ್ರ ಯೋಚಿಸುವವರು ಸ್ವಾರ್ಥಿಗಳಾಗುತ್ತಾರೆ. ಇಂತವರಿಂದಲೇ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು‌ ಎಂದು ಹೇಳಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈಗಲೂ ಸಮಾಜದಲ್ಲಿ ಜಾತಿ ಶ್ರೇಣಿಯನ್ನು ಮುಂದುವರೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಈ ಸಮಾಜದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಮುಂದೆ ಬರುವುದನ್ನು ಇಚ್ಛೆ ಪಡುವುದಿಲ್ಲ, ಈ ಹಿನ್ನೆಲೆಯಲ್ಲಿ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ನೀಡಲು ಹಲವು ಭಾಗ್ಯಗಳನ್ನು ಜಾರಿಗೊಳಿಸಿದ್ದೆ. ಈಗ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಎಲ್ಲಾ ಜಾತಿಯ ದುರ್ಬಲ ವರ್ಗಕ್ಕೆ ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯವನ್ನು ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಡ್ಡಾಯವಾಗಿ ದೊರೆಯಬೇಕು. ಈ ನಿಟ್ಟನಲ್ಲಿ ವಿದ್ಯಾರ್ಥಿ ನಿಲಯಗಳು ಅತ್ಯಾವಶ್ಯಕ. ಜಾತಿ ವ್ಯವಸ್ಥೆ ಆರ್ಥಿಕ, ಸಾಮಾಜಿಕ ಅಸಮಾನತೆಗೆ ಕಾರಣವಾಗಿದ್ದು, ದುರ್ಬಲ ವರ್ಗದ ಜನರು ಅವಕಾಶದಿಂದಲೂ ವಂಚಿತರಾಗುತ್ತಿದ್ದಾರೆ. ಸಮಾನ ಅವಕಾಶಗಳು ದೊರೆಯುವ ಮೂಲಕ ತುಳಿತಕ್ಕೊಳಗಾದವರು ಜೀವನದಲ್ಲಿ ಅಭಿವೃದ್ಧಿ ಹೊಂದುವಂತಾಗಬೇಕು. ಯಾವುದೇ ಜಾತಿ ಧರ್ಮಗಳು ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವುದಿಲ್ಲ ಎಂದು ಹೇಳಿದರು.

ಇತಿಹಾಸ ತಿಳಿದವರು ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದ್ದಾರೆ. ಎಲ್ಲರೂ ಸರಿಸಮಾನರಾಗಿ ಬಾಳಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಬುದ್ಧ, ಬಸವಾದಿ ಶರಣರು ಹಾಗೂ ಅಂಬೇಡ್ಕರ್, ಗಾಂಧಿಜೀ ಅವರ ಪ್ರತಿಪಾದನೆಯಾಗಿತ್ತು ಎಂದರು.

ನಮ್ಮ ಸಂವಿಧಾನ ಜಾರಿಯಾಗುವ ಮೊದಲೇ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. 1960 ರಲ್ಲಿ ನಾಗೇಗೌಡ ಸಮಿತಿ ರಚನೆಯಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ಆಯೋಗ ರಚಿಸಲಾಯಿತು. ವರದಿಗೆ ವಿರೋಧದ ನಡುವೆಯೂ ಜಾರಿಗೆ ತರಲಾಯಿತು. 1977 ರಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿಲಯಗಳಲ್ಲಿ ಶೇ.75 ರಷ್ಟು ಹಿಂದುಳಿದ ಜಾತಿಗಳ ಮಕ್ಕಳಿದ್ದರೆ, ಶೇ.25 ರಷ್ಟು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಕ್ಕಳಿದ್ದಾರೆ. 1,87,000 ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು‌ ಹೇಳಿದರು.

ನಾನು ಓದುವಾಗ ಮೀಸಲಾತಿ ವ್ಯವಸ್ಥೆ ಇಲ್ಲದಿದ್ದ ಕಾರಣ, ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಪಿಯುಸಿ, ಪದವಿ ಮಾಡುವ ಸಂದರ್ಭದಲ್ಲಿ ವಸತಿ ವ್ಯವಸ್ಥೆ ಇಲ್ಲದೇ, ನಾನೇ ಒಂದು ರೂಂ ಮಾಡಿಕೊಂಡು ಓದುತ್ತಿದ್ದೆ. ಆದ್ದರಿಂದ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅರಿತಿದ್ದ ನಾನು ವಿದ್ಯಾಸಿರಿ ಯೋಜನೆಯನ್ನು ಜಾರಿ ಮಾಡಿದೆ ಎಂದರು.

ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ದೊರಕಿಸುವ ಉದ್ದೇಶದಿಂದ ಪ್ರೀಮೆಟ್ರಿಕ್ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಿದೆ. ಹೀಗೆ ಐದು ವರ್ಷವೂ ಕೂಡ ವಿದ್ಯಾರ್ಥಿ ವೇತನವನ್ನು ಹಂತ ಹಂತವಾಗಿ ಹೆಚ್ಚಿಸಲಾಗಿ, ಮುಂಚೆ ಇದ್ದ 750 ರೂ ವಿದ್ಯಾರ್ಥಿ ವೇತನವನ್ನು 1750 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಸ್ಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಲಭಿಸಿದಾಗ ಮಾತ್ರ ಉತ್ತಮ ಜ್ಞಾನಾರ್ಜನೆ ಮಾಡಲು ಸಾಧ್ಯ. 2024-25 ರಲ್ಲಿಯೂ ಕೂಡ ವಿದ್ಯಾರ್ಥಿ ವೇತನವನ್ನು 1850 ರೂ.ಗಳಿಗೆ ಪುನ: ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ನಾನು ಹಣಕಾಸು ಮಂತ್ರಿಯಾಗಿದ್ದಾಗ ದಲಿತ ಸಂಘರ್ಷ ಸಮಿತಿಯವರ ಸಾರಾಯಿ ಅಂಗಡಿ ಬೇಡ, ಮಕ್ಕಳಿಗೆ ವಸತಿ ಶಾಲೆ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನಾಧರಿಸಿ, 1994-95 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಯಿತು. ಹೋಬಳಿಗೊಂದು ವಸತಿ ಶಾಲೆ ಯೋಜನೆಯಂತೆ ರಾಜ್ಯದಲ್ಲಿ ಒಟ್ಟು 822 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ 20 ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಳ್ಳಿಗಾಡಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮುಂದಿನ ವರ್ಷದೊಳಗೆ ರಾಜ್ಯದ ಪ್ರತಿ ಹೋಬಳಿಯಲ್ಲಿ ಒಂದು ವಸತಿ ಶಾಲೆ ನಿರ್ಮಿಸುವ ಗುರಿಯನ್ನು ಸಾಧಿಸಬೇಕಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಹತ್ತನೆ ತರಗತಿಯಲ್ಲಿ ಓದುವ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮ, ಬಡಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *