ಸಾಗುವಳಿ ಚೀಟಿ, ಹಕ್ಕುಪತ್ರಗಳ ವಿತರಣೆ, ಸ್ಮಶಾನ ಭೂಮಿ ಮಂಜೂರು ಸೇರಿದಂತೆ ಇತರೆ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ- ಬಿಎಎಸ್ ಪಿ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಅಸ್ಪೃಶ್ಯತೆ, ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಇಲ್ಲಿಯವರೆಗೂ ಆಡಳಿತ ನಡೆಸಿರುವ ಯಾರೊಬ್ಬರು ಜಾರಿಗೆ ತಂದಿಲ್ಲ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿಕೊಟ್ಟಿರುವ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವಲ್ಲಿ ವಿಫಲವಾಗಿರುವುದೇ ದೇಶದಲ್ಲಿ ಬಡವರು ಇನ್ನೂ ಬಡವರಾಗಿಯೇ ಉಳಿಯುವಂತಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ, ಹಕ್ಕುಪತ್ರಗಳ ವಿತರಣೆ, ಸ್ಮಶಾನ ಭೂಮಿ ಮಂಜೂರು ಮೊದಲಾದ ಬಹುಜನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.

ನಗರದ ಪ್ರವಾಸಿ ಮಂದಿರ ವೃತ್ತದ ಬಳಿಯಿಂದ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಮಾನತೆಯ ಭರವಸೆಗಳು ಭಾಷಣಕ್ಕೆ ಮಾತ್ರವೇ ಸೀಮಿತವಾಗಿದ್ದು, ಇಂದಿಗೂ ಅಲ್ಪ ಸಂಖ್ಯಾತ ಉನ್ನತ ವರ್ಗದವರ ಕೈಯಲ್ಲಿ ವ್ಯವಸ್ಥೆ ಸಿಲುಕಿದೆ ಎಂದರು.

ದೇಶದ ಬಹಳಷ್ಟು ಬಡಜನತೆ ಇಂದಿಗೂ ಸೂರು ಹಾಗೂ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕಿದೆ. ಈ ದಿಸೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಎಸ್.ಸಿ/ಎಸ್.ಟಿ ಹಿಂದುಳಿದವರು, ಧಾರ್ಮಿಕ ಅಲ್ಪಾಸಂಖ್ಯಾತರು ಬಹುಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಲಾಗುತ್ತಿದ್ದು, ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 35ರಿಂದ 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು. ಬಡ ಕುಟುಂಬಗಳಿಗೆ ಹಕ್ಕುಪತ್ರಳನ್ನು ವಿತರಿಸಬೇಕು. ಜಿಲ್ಲೆಯಲ್ಲಿ  ಬಡ ಕುಟುಂಬಗಳಿಗೆ ಶೇ.50ರಷ್ಟು ಸ್ಮಶಾನಗಳ ಕೊರತೆಯಿದ್ದು, ಸ್ಮಶಾನ ಮಂಜೂರು ಮಾಡಬೇಕು. ಸರ್ವೆ, ಪೋಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪಿಟಿಸಿಎಲ್ ಕಾಯ್ದೆ ಅನ್ವಯ ಪರಭಾರೆಯಾಗಿರುವ ಜಮೀನುಗಳ ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಪಡಿಸಬೇಕು. ಎಸ್.ಸಿ,ಎಸ್.ಟಿ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು, ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಪರಿಹಾರ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ನಿವೇಶನರಹಿತರಿಗೆ ನಿವೇಶನ ಮಂಜೂರು ಮಾಡಬೇಕು. ನಿರುದ್ಯೋಗಳಿಗೆ ಮಾಸಿಕ ₹5 ಸಾವಿರ ಭತ್ಯೆನೀಡಬೇಕು. ಜನರಿಗೆ ಗ್ರಾಮ ಪಂಚಾಯಿತಿ , ಸ್ಥಳೀಯ ಆಡಳಿತಗಳು ಮೂಲಕ ಸೌಕರ್ಯಗಳನ್ನು ಒದಗಿಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಎಸ್.ಸಿ, ಎಸ್.ಟಿ ಜಾತಿಯ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ಕಾರ್ಯದರ್ಶಿಗಳಾದ ಗೂಳ್ಯ ವೆಂಕಟೇಶ್, ನಂದಿಗುಂದ ಪಿ.ವೆಂಕಟೇಶ್, ಕತ್ತರಗುಪ್ಪೆ ರಮೇಶ್, ನಾಗರಾಜ್, ಪದ್ಮರಾಜ್,  ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮಹದೇವ್, ಜಿಲ್ಲಾ ಸಂಯೋಜಕ ಎಚ್.ನರಸಿಂಹಯ್ಯ, ಬಿ.ಎಲ್.ರಾಜಪ್ಪ,ಗೋವಿಂದರಾಜು,  ಜಿಲ್ಲಾ ಕಾರ್ಯದರ್ಶಿ ದೇವಪ್ಪ, ನರಸಿಂಹ, ಉಪಾಧ್ಯಕ್ಷ ನಾಗರಾಜ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಪಿಳ್ಳಪ್ಪ, ದೇವನಹಳ್ಳಿ ಘಟಕದ ಅಧ್ಯಕ್ಷ ನಾಗರಾಜ್, ಹೊಕೋಟೆ ಅಧ್ಯಕ್ಷೆ ಲಕ್ಷ್ಮೀನಾರಾಯಣ, ನೆಲಮಂಗಲ ಅಧ್ಯಕ್ಷ ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *