Categories: ಲೇಖನ

ಸಾಂಸ್ಕೃತಿಕ ನಾಯಕ ಬಸವಣ್ಣ ಜಯಂತಿ: ” ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸು”…..

ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ – ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ……

ನಿಜಕ್ಕೂ ಈ ನೆಲದ ಒಟ್ಟು ಇತಿಹಾಸದಲ್ಲಿ ತಮ್ಮ ಸಾಮಾಜಿಕ ವ್ಯಕ್ತಿತ್ವದ, ಅತ್ಯಂತ ಪ್ರಭಾವಶಾಲಿಯಾದ ಒಬ್ಬ ವ್ಯಕ್ತಿ ಆ ಸ್ಥಾನಕ್ಕೆ ಅರ್ಹರು ಎನ್ನುವುದಾದರೆ ಅದು ನಿಸ್ಸಂದೇಹವಾಗಿ ಬಸವಣ್ಣನವರು ಎಂಬುದು ನಿರ್ವಿವಾದ. ಜೊತೆಗೆ ಸಾಂಕೇತಿಕವಾಗಿ ಮಾತ್ರ ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪ್ರತಿನಿಧಿಸುವುದಿಲ್ಲ. ವಾಸ್ತವದಲ್ಲಿ ಈ ಮಣ್ಣಿನ ಎಲ್ಲಾ ಮೌಲ್ಯಯುತ ಗುಣಲಕ್ಷಣಗಳ ನೈಜ ವ್ಯಕ್ತಿ ಬಸವಣ್ಣ…..

ಈಗ ಅವರನ್ನು ಅಧಿಕೃತವಾಗಿ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರಬಹುದು. ಆದರೆ ಆ ಘೋಷಣೆಯ ನಿಜವಾದ ಆಶಯವಾದ ಮಾನವಿಯ ಮೌಲ್ಯಗಳ, ಸಮ ಸಮಾಜದ ನಿರ್ಮಾಣದ ಉದ್ದೇಶ ಮಾತ್ರ ಇನ್ನೂ ಈಡೇರಿಲ್ಲ. ಇಂದು ಶರಣ ಸಂಸ್ಕೃತಿಯ, ಬಸವ ತತ್ವದ ಅನುಷ್ಠಾನ ಕೇವಲ ಪುಸ್ತಕ, ಭಾಷಣ, ಉಪನ್ಯಾಸ, ಮಾತುಗಳಿಗೆ ಸೀಮಿತವಾಗಿದೆ. ಬಸವ ತತ್ವ ವಿನಾಶದ ಅಂಚಿನಲ್ಲಿದೆ, ಅಷ್ಟೇ ಅಲ್ಲ ಬಹುತೇಕ ವಿರುದ್ಧ ದಿಕ್ಕಿನಲ್ಲಿಯೇ ನಡೆಯುತ್ತಿದೆ…..

ಜಾತಿರಹಿತ, ವರ್ಗರಹಿತ, ಧರ್ಮರಹಿತ, ವರ್ಣರಹಿತ, ಲಿಂಗ ರಹಿತ, ಶ್ರಮ ಸಂಸ್ಕೃತಿಯ ಪ್ರತಿಬಿಂಬವಾದ ಬಸವ ತತ್ವ ಕೇವಲ ಮಾನವ ಜೀವಿಯ ಹಿತಾಸಕ್ತಿಯನ್ನು ಮಾತ್ರ ಬಯಸದೆ ಸಕಲ ಜೀವಾತ್ಮಗಳಿಗೂ ಲೇಸನೇ ಬಯಸುತ್ತದೆ….

ಶರಣರ ಭರವೆಮಗೆ ಪ್ರಾಣ ಜೀವಾಳವಯ್ಯ ಎನ್ನುವ ಅತ್ಯದ್ಭುತ ಮನುಷ್ಯ ಸಂಬಂಧದ ಅತಿಥಿ ಸತ್ಕಾರವನ್ನು ನಮಗೆ ತಿಳಿಸುತ್ತದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ ಎಂಬ ಅತ್ಯದ್ಭುತ ಜ್ಞಾನ ವಿನಯವನ್ನು ನಮಗೆ ಕಲಿಸುತ್ತದೆ. ನೊಂದವರ ನೋವಾ ನೋಯದವರೆತ್ತ ಬಲ್ಲರೋ ಎಂಬ ಮನಮಿಡಿಯುವ ಆತ್ಮ ಸಾಕ್ಷಿಯ ಪ್ರಜ್ಞೆಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತದೆ. ಕಾಯಕವೇ ಕೈಲಾಸ ಎಂಬ ದುಡಿಮೆಯ ಮಹತ್ವವನ್ನು ಸ್ಪಷ್ಟವಾಗಿ ಸಾರುತ್ತದೆ. ಇವನಾರವ ಇವನಾರವ ಎಂದೆಣಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎಂಬ ಮಾನವೀಯತೆಯ ಉತ್ಕೃಷ್ಟ ಸಂದೇಶವನ್ನು ನೀಡುತ್ತದೆ…..

ಬಸವ ತತ್ವದ ವೈಶಿಷ್ಟ್ಯಗಳಿರುವುದೇ ಇಲ್ಲಿ. ಈ ನೆಲದ ಪ್ರಾಕೃತಿಕ ಗುಣಗಳನ್ನು ಸಹಜವಾಗಿಯೇ ತನ್ನ ಚಿಂತನೆಗಳಲ್ಲಿ ಮೈಗೂಡಿಸಿಕೊಂಡಿರುವ ವೈಚಾರಿಕ ಚಿಂತನೆಯ ಪ್ರತಿಧ್ವನಿ ಈ ಬಸವ ತತ್ವ……

ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ……..

ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2024 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು/ಹದಿನೈದು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ ಸಾಕಷ್ಟು ದಾಖಲಾಗಿವೆ. ಇವುಗಳಲ್ಲಿ ಬಸವಣ್ಣ ದೇವರಾಗಿಯೂ, ಧರ್ಮವಾಗಿಯೂ, ಸಮ ಸಮಾಜದ ಕ್ರಾಂತಿಕಾರಿಯಾಗಿಯೂ, ಓಟುಗಳಾಗಿಯೂ ಪರಿವರ್ತನೆಯನ್ನು ಹೊಂದಿದ್ದಾರೆ…..

ರಸ್ತೆಗಳು, ಭವನಗಳು, ಮೂರ್ತಿಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು, ಪ್ರಶಸ್ತಿಗಳು ಅವರ ಹೆಸರಿನಲ್ಲಿ ಆಗಿದೆ…..

ಆದರೆ ನಿಜವಾಗಿ ಆಗಬೇಕಾಗಿರುವುದು ಮಾತ್ರ ಇನ್ನೂ ಗಗನ ಕುಸುಮವಾಗಿದೆ……

ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ…..

12 ನೆಯ ಶತಮಾನದಲ್ಲಿಯೇ ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನವರನ್ನು ಏನೆಂದು ಕರೆಯುವುದು. 2024 ರ ಈ ಸಂದರ್ಭದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು……

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಶೆಟ್ಟರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ ಚಮ್ಮಾರ ಹೊಲೆಯ ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ ಎಂಟು ಶತಮಾನಗಳ ಹಿಂದೆಯೇ ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದರು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವೇ…..

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು….

ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು – ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವಣ್ಣನವರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ……

ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಈಗ ಜನಪ್ರಿಯವಾಗಿರುವಾಗ ಆಗಿನ ಅವರ ಹೋರಾಟ ಹೇಗಿರಬಹುದು…..

ಒಕ್ಕಲಿಗರು, ವೀರಶೈವರು ಒಂದೊಂದು ಪಕ್ಷದ ಬಾಲಗಳಿಗೆ ಜೋತು ಬಿದ್ದಿರುವಾಗ, ಲಿಂಗಾಯಿತರು – ವೀರಶೈವರು ಪರಸ್ಪರ ಕಚ್ಚಾಡುತ್ತಿರುವಾಗ, ದಲಿತರು – ಬ್ರಾಹ್ಮಣರು ದ್ವೇಷಿಸುತ್ತಿರುವಾಗ, ಮುಸ್ಲಿಮರು – ಕ್ರಿಶ್ಚಿಯನ್ನರು ದೂರವಾಗಿರುವಾಗ, ಹಿಂದೂಗಳು – ಮುಸ್ಲಿಮರು ವಿರೋಧಿಗಳಾಗಿರುವಾಗ. ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ, ಪ್ರಜಾಪ್ರಭುತ್ವದ ತಳಹದಿಯಾದ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ, ಕೆಲವು ಅಪರೂಪದ ಉದಾಹರಣೆ ಹೊರತುಪಡಿಸಿ, ಒಬ್ಬ ಒಕ್ಕಲಿಗ ಅಭ್ಯರ್ಥಿ ಚುನಾವಣೆಯಲ್ಲಿ ಲಿಂಗಾಯತರು ಹೆಚ್ಚು ಮತವಿರುವ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಅದೇ ರೀತಿ ವೀರಶೈವರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಒಕ್ಕಲಿಗರು ಗೆಲ್ಲುವುದಿಲ್ಲ. ದಲಿತರು ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಬ್ರಾಹ್ಮಣರು ವೇದ ಉಪನಿಷತ್ತು ಮನುಸ್ಮೃತಿಗಳನ್ನು ಬಿಟ್ಟು ಕದಲುತ್ತಿಲ್ಲ, ಅತ್ಯಾಚಾರಿಗಳನ್ನೇ ಜಾತಿಯ ಆಧಾರದ ಮೇಲೆ ನೋಡಲಾಗುತ್ತಿದೆ…….

ಇಂತಹ ವಾತಾವರಣದಲ್ಲಿ ಗೆಳೆಯರೆ, ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ…..

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು, ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ, ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ, ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ.

ಜಾತಿ ರಹಿತ ಚುನಾವಣೆ, ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ. ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ……

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ…..

ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ…..

ಆದರೂ, ಮತ್ತೆ ಕಲ್ಯಾಣಕ್ಕಾಗಿ ಆ ಆಶಯವನ್ನು ನನಸು ಮಾಡಲು ಮನಸ್ಸುಗಳ ಅಂತರಂಗದ ಚಳವಳಿ ಸದಾ ಜಾರಿಯಲ್ಲಿರುತ್ತದೆ ಅದು ವಾಸ್ತವವಾಗುವವರೆಗೂ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ.

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ…..?

ಪಟಾಕಿ ದುರಂತಕ್ಕೆ ಯಾರು ಹೊಣೆ.... ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ..... ಲೇಸರ್…

2 hours ago

ನಾಳೆ (ಏ.23ರಂದು) ವಿವಿಧ ಊರುಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.23 ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ F09-Rajaghatta, F03-Thalagavara, F12-Heggadihalli, F17- Nandi…

2 hours ago

ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಪರವಾನಗಿ ಭೂಮಾಪಕರ ಪ್ರತಿಭಟನೆ

ಖಾಯಂ ನೇಮಕಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ…

15 hours ago

ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

16 hours ago

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ…

16 hours ago

ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಹೆಚ್ಚಿದ ಕರಡಿ ಹಾವಳಿ: ಜೀವ ಭಯದಲ್ಲಿ ರೈತರು

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಹಾವಳಿ ಮುಂದುವರಿದಿದೆ.. ರಾತ್ರೋರಾತ್ರಿ ರೈತರ ಹೊಲಗಳಿಗೆ ನುಗ್ಗಿ ಬಾಳೆ, ಹಲಸಿನ…

17 hours ago