ಇಂದು ನಾಡಿನೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವನ್ನ ಗಟ್ಟಿ ಮಾಡುವ ಹಬ್ಬ ಇದು. ಈ ದಿನದಂದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದರಿಂದ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ಸಹೋದರರಿಗೆ ರಾಖಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಸಹೋದರಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಪ್ರಾಪ್ತ ವಿದ್ಯಾರ್ಥಿನಿ ಕೆಲ ಪುಂಡರ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದಳು. ಸಾಯುತ್ತೇನೆಂದು ತಿಳಿದು ತನ್ನ ಸಹೋದರರಗೆ ಕೊನೆಯ ಬಾರಿಗೆ ರಾಖಿ ಕಟ್ಟಿದಳು..ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.
ತೆಲಂಗಾಣದ ಮಹಬೂಬಾಬಾದ್‌ನಲ್ಲಿರುವ ಆಸ್ಪತ್ರೆಯಲ್ಲಿಂದು ನಡೆದಿದೆ.
ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಯುವತಿಗೆ ಒತ್ತಾಯಿಸಿ 17 ವರ್ಷದ ಯುವಕನೋರ್ವ ಕಿರುಕುಳ ನೀಡುತ್ತಿದ್ದ. ಯುವಕನ ಕಿರುಕುಳ ತಾಳಲಾರದೆ ಬಾಲಕಿ ಶನಿವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ನೋಡಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಾಲಕಿ ಕೊಡಾಡ್‌ನಲ್ಲಿ ಡಿಪ್ಲೊಮಾ ಓದುತ್ತಿದ್ದಳು, ಅಲ್ಲಿ ಒಬ್ಬ ವ್ಯಕ್ತಿ ತನ್ನನ್ನು ಮದುವೆಯಾಗುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿ ಆತನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದಳು. ಈ ಹಿನ್ನೆಲೆ ಆ ಯುವಕ ತನ್ನ ಕೆಲವು ಸ್ನೇಹಿತರ ಜೊತೆಗೂಡಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಪುಂಡರ ಗುಂಪಿನಿಂದ ಕಿರುಕುಳವನ್ನು ಸಹಿಸಲಾಗದ ಆಕೆ ತನ್ನ ಜೀವನವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ವಿಷ ಸೇವಿಸಿದ್ದಾಳೆ.
ನರಸಿಂಹಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.