ಸಹಕಾರ ಸಂಘಗಳು ರಾಜಕೀಯ ಕೇಂದ್ರಗಳಾಗಬಾರದು- ಕೆಎಂಎಫ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್

ತಾಲ್ಲೂಕಿನಲ್ಲಿ ಚುನಾವಣೆಗೆ ಸಜ್ಜಾಗಿರುವ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಯಾವುದೇ ಚುನಾವಣೆಗಳನ್ನು ನಡೆಸದೆ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಗ್ರಾಮಗಳಲ್ಲಿ ಶಾಂತಿಯ ವಾತಾವರಣ ಮೂಡುವಂತೆ ಮಾಡಬೇಕು ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮೆಣಸಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೊದಲನೇ ಮಹಡಿ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಸಹಕಾರ ಸಂಘಗಳು ರಾಜಕೀಯ ಕೇಂದ್ರಗಳಾಗಬಾರದು ಎಂದರು.

ಎಂಪಿಸಿಎಸ್ ಸಂಘಗಳಿಗೆ ಚುನಾವಣೆ ಇಲ್ಲದೆ ಪದಾಧಿಕಾರಿಗಳ ಆಯ್ಕೆ ನಡೆದರೆ ಗ್ರಾಮದಲ್ಲಿ ಪರಸ್ಪರ ಸೌಹಾರ್ದ ಮೂಡುತ್ತದೆ. ಹಾಲಿನ ಡೇರಿಗಳಲ್ಲಿ ದ್ವೇಷ, ಕೋಪ, ಸೇಡಿನ ರಾಜಕಾರಣ ಎಡೆ ಮಾಡಕೊಡಬಾರದು. ರೈತರ ಪರವಾಗಿ ಬಮೂಲ್ ಮತ್ತು ಕೆಎಂಎಫ್ ನಿರಂತರವಾಗಿ ಶ್ರಮಿಸುತ್ತಿದೆ. ತಾಲ್ಲೂಕಿನಲ್ಲಿ ಕೇವಲ ಆರು ಡೇರಿಗಳಿಗೆ ನೂತನ ಸುಸಜ್ಜಿತ ಕಟ್ಟಡಗಳ ಅವಶ್ಯಕತೆ ಇದ್ದು, ಶೀಘ್ರವಾಗಿ ಬಾಕಿ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ ಎಂದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ರೈತರಿಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಸರ್ಕಾರದ ಮೂಲಕ ನೀಡಲು ಯತ್ನಿಸಲಾಗುವುದು. ಡೇರಿಗಳ ಉನ್ನತೀಕರಣಕ್ಕೆ ಸಹಕಾರ ನೀಡಲಾಗುತ್ತದೆ. ಡೇರಿಗಳಿಗೆ ಶುದ್ಧ ಹಾಲು ನೀಡಿದರೆ ರೈತರಿಗೂ ಲಾಭ, ಡೇರಿಗಳು ಲಾಭಾಂಶದಲ್ಲಿ ನಡೆದು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ರೈತರು ಶುದ್ಧ ಹಾಲನ್ನು ಪೂರೈಕೆ ಮಾಡಿ ಎಂದರು.

ಈ ವೇಳೆ ಮೆಣಸಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ ಕೃಷ್ಣಪ್ಪ, ಉಪಾಧ್ಯಕ್ಷ ದೇವರಾಜು, ಡೇರಿ ಉಪ ವ್ಯವಸ್ಥಾಪಕ ಎಲ್.ಬಿ ನಾಗರಾಜು, ಎಂಪಿಸಿಎಸ್ ನೌಕರರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ್, ಮೆಣಸಿ ಎಂಪಿಸಿಎಸ್ ಮುಖ್ಯಕಾರ್ಯನಿರ್ವಾಹಕ ರಾಜೇಶ್, ಹಾಲು ಪರೀಕ್ಷಕ ಅಶ್ವಥನಾರಾಯಣ ಇದ್ದರು.

Leave a Reply

Your email address will not be published. Required fields are marked *